ADVERTISEMENT

ಕೋಡ್ ವರ್ಡ್ ಬಿಡಿಸಿದಾಗ ‘ಪಾನ್ಸರೆ’ ಹೆಸರು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 19:02 IST
Last Updated 16 ಜೂನ್ 2018, 19:02 IST

ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಮಹಾರಾಷ್ಟ್ರದ ಪ್ರಗತಿಪರ ಚಿಂತಕ ಗೋವಿಂದ ಪಾನ್ಸರೆ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆಯಾಗಿದೆ. ಒಬ್ಬನೇ ‘ಕಿಂಗ್‌ಪಿನ್‌’ ಉಪ ತಂಡಗಳನ್ನು ರಚಿಸಿ ಬೇರೆ ಬೇರೆ ಶೂಟರ್‌ಗಳ ಮೂಲಕ ಈ ಕೊಲೆಗಳನ್ನು ಮಾಡಿಸಿದ್ದಾನೆ ಎಂಬ ಮಹತ್ವದ ಸಂಗತಿ ಎಸ್ಐಟಿ ತನಿಖೆಯಿಂದ ಗೊತ್ತಾಗಿದೆ.

ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್‌ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನಗರಕ್ಕೆ ದೌಡಾಯಿಸಿದ ಸಿಬಿಐ ಹಾಗೂ ಮಹಾರಾಷ್ಟ್ರ ಎಸ್‌ಐಟಿ ಅಧಿಕಾರಿಗಳು, ಪಾನ್ಸರೆ ಮತ್ತು ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಅಮೋಲ್‌ನ ಡೈರಿಯಲ್ಲಿದ್ದ ಕೋಡ್‌ವರ್ಡ್‌ಗಳ ಜೆರಾಕ್ಸ್‌ ಪ್ರತಿಯನ್ನೂ ತೆಗೆದುಕೊಂಡು ಹೋಗಿದ್ದಾರೆ.

ಇದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಎಸ್‌ಐಟಿ ಅಧಿಕಾರಿಯೊಬ್ಬರು, ‘ಅಮೋಲ್ ಕಾಳೆ, ಸುಜಿತ್ ಅಲಿಯಾಸ್ ಪ್ರವೀಣ್ ಹಾಗೂ ಮನೋಹರ್ ಯಡವೆ ಬಳಿ ಮೂರು ಡೈರಿಗಳು ಸಿಕ್ಕಿದ್ದವು. ಅಮೋಲ್‌ನ ಡೈರಿಯಲ್ಲಿ ಮರಾಠಿ ಬರಹ ಹಾಗೂ ಕೋಡ್ ವರ್ಡ್‌ಗಳಿದ್ದವು. ಅವುಗಳನ್ನು ಡಿ–ಕೋಡ್ ಮಾಡುವಾಗ ‘ಪಾನ್ಸರೆ’ ಎಂಬ ಶಬ್ದವೂ ಹೊರಬಂತು. ಹೀಗಾಗಿ, ಅದರ ಒಂದು ಪ್ರತಿಯನ್ನು ಮಹಾರಾಷ್ಟ್ರ ಪೊಲೀಸರಿಗೆ ಕೊಟ್ಟು ಕಳುಹಿಸಿದ್ದೇವೆ. ಪ್ರವೀಣ್ ಹಾಗೂ ಯಡವೆ ಕನ್ನಡದಲ್ಲಿ ಡೈರಿ ಬರೆದಿದ್ದು, ಆ ವಿವರಗಳನ್ನು ನಾವೇ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಸೋಮವಾರದೊಳಗೆ ಅವರಿಗೆ ರವಾನಿಸುತ್ತೇವೆ’ ಎಂದು ಹೇಳಿದರು.

ADVERTISEMENT

‘ಗೌರಿ ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ, ಆರೋಪಿಗಳನ್ನು ಬೇರೆ ರಾಜ್ಯಗಳ ಪೊಲೀಸರ ಕಸ್ಟಡಿಗೆ ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದು, ಮತ್ತೆ ಕಸ್ಟಡಿಗೆ ಪಡೆಯಲು ಅರ್ಜಿ ಸಲ್ಲಿಸುತ್ತೇವೆ’ ಎಂದರು.

ಸಂಘಟನೆ ಹೆಸರನ್ನು ಏಕೆ ತರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಅದು ನಿಷೇಧಿತ ಸಂಘಟನೆಯಾಗಿದ್ದರೆ ಹೆಸರು ಬಹಿರಂಗಪಡಿಸುತ್ತಿದ್ದೆವು. ಜತೆಗೆ, ಮೂರ್ನಾಲ್ಕು ಸದಸ್ಯರು ಕೃತ್ಯದಲ್ಲಿ ಪಾಲ್ಗೊಂಡರು ಎಂಬ ಮಾತ್ರಕ್ಕೆ, ಇಡೀ ಸಂಘಟನೆಯನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದು ಕಾನೂನು ಬಾಹಿರವಾಗುತ್ತದೆ’ ಎಂದರು.

‘ಮೂರೂ ಹತ್ಯೆಗಳಲ್ಲೂ ಒಂದೇ ಪಿಸ್ತೂಲ್ ಬಳಕೆಯಾಗಿದ್ದರೂ, ಶೂಟರ್‌ ಗಳು ಬೇರೆ ಬೇರೆ’ ಎಂದು ಅವರು ವಿವರಿಸಿದರು.

‘ಹತ್ಯೆ ಹಿಂದಿನ ಕೈಗಳಿಗೆ ಕೋಳ ತೊಡಿಸಿ’

‘ಗೌರಿ ಹಂತಕರನ್ನು ಬಂಧಿಸಿರುವ ಕರ್ನಾಟಕ ಪೊಲೀಸರು, ದೇಶದಲ್ಲಿ ನಡೆಯಬಹುದಾಗಿದ್ದ ಹಲವು ಪ್ರಗತಿಪರರ ಹತ್ಯೆಗಳನ್ನು ತಡೆದಿದ್ದಾರೆ. ನನ್ನ ಮಾವನ ಕೊಲೆ ಪ್ರಕರಣದಲ್ಲೂ ಆರೋಪಿಗಳ ಪಾತ್ರ ಇರುವುದು ಖಚಿತವಾಗಿರುವ ಕಾರಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ತನಿಖೆ ನಡೆಸಬೇಕು. ಸರಣಿ ಹತ್ಯೆಗಳ ಹಿಂದಿರುವ ಕಾಣದ ಕೈಗಳಿಗೂ ಆದಷ್ಟು ಬೇಗ ಕೋಳ ತೊಡಿಸಬೇಕು’ ಎಂದು ಪಾನ್ಸರೆ ಸೊಸೆ ಮೇಧಾ ಪಾನ್ಸರೆ ಮನವಿ ಮಾಡಿದ್ದಾರೆ.

ತಾವಡೆ ಬಂಧನದ ಬಳಿಕ ಮುಖಂಡತ್ವ?
‘2009ರಿಂದ ಧಾರ್ಮಿಕ ಸಂಘಟನೆಯೊಂದರಲ್ಲಿ (ಹೆಸರು ಬೇಡ) ಗುರುತಿಸಿಕೊಂಡಿದ್ದ ಅಮೋಲ್, ಪ್ರಗತಿಪರರನ್ನು ಕೊಲ್ಲುವ ಸಲುವಾಗಿಯೇ ಪುಣೆ ಹಾಗೂ ಗೋವಾದಲ್ಲಿ 2014–15ರಲ್ಲಿ ವಿಶೇಷ ತರಬೇತಿ ಪಡೆದಿದ್ದ. ತಾನು ಸಜ್ಜಾದ ಬಳಿಕ ದೇಗ್ವೇಕರ್‌ಗೆ ತರಬೇತಿ ಕೊಟ್ಟು ಆತನನ್ನೂ ತಯಾರಿ ಮಾಡಿದ್ದ. ಈ ಎಲ್ಲ ವಿವರಗಳನ್ನೂ ಅಮೋಲ್ ಡೈರಿಯಲ್ಲಿ ವಿವರಿಸಿದ್ದಾನೆ. ತಾವಡೆ ಬಂಧನದ ನಂತರ ಮುಂದಿನ ದಾಳಿಗಳಿಗೆ ಅಮೋಲ್ ನೇತೃತ್ವ ವಹಿಸಿದ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.