ADVERTISEMENT

ಕೋಲಾರ: ಟಿಪ್ಪು ಜಯಂತಿಗೆ ಒಮ್ಮತ ಮೂಡದ ಕಾರಣ ಕಾರ್ಯಕ್ರಮ ವಿಳಂಬ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:42 IST
Last Updated 10 ನವೆಂಬರ್ 2017, 6:42 IST
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌, ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಶಾಸಕ ವರ್ತೂರು ಪ್ರಕಾಶ್‌ ಟಿಪ್ಪು ಜಯಂತಿ ಕಾರ್ಯಕ್ರಮದ ಸ್ಥಳದ ವಿಷಯವಾಗಿ ಮುಸ್ಲಿಂ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌, ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಶಾಸಕ ವರ್ತೂರು ಪ್ರಕಾಶ್‌ ಟಿಪ್ಪು ಜಯಂತಿ ಕಾರ್ಯಕ್ರಮದ ಸ್ಥಳದ ವಿಷಯವಾಗಿ ಮುಸ್ಲಿಂ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.   

ಕೋಲಾರ: ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸುವ ಸ್ಥಳದ ವಿಷಯವಾಗಿ ಮುಸ್ಲಿಂ ಮುಖಂಡರು ಹಾಗೂ ಜಿಲ್ಲಾಡಳಿತದ ನಡುವೆ ಒಮ್ಮತ ಮೂಡದ ಕಾರಣ ಕಾರ್ಯಕ್ರಮ ವಿಳಂಬವಾಗಿದೆ.

ಜಿಲ್ಲಾಡಳಿತವು ನಗರದ ಆಲ್‌ ಅಮೀನ್‌ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಜಯಂತಿ ಆಚರಿಸಲು ಸಿದ್ಧತೆ ಮಾಡಿಕೊಂಡಿತ್ತು. ಅಲ್ಲದೇ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೂ ಅದೇ ಸ್ಥಳವನ್ನು ಪ್ರಕಟಿಸಿತ್ತು. ಆದರೆ, ಇದಕ್ಕೆ ಒಪ್ಪದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹಮ್ಮದ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಹಾಗೂ ಮುಸ್ಲಿಂ ಮುಖಂಡರು ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಯಂತಿ ಆಚರಿಸುವಂತೆ ಒತ್ತಾಯಿಸಿದ್ದಾರೆ.

‘ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಚನ್ನಯ್ಯ ರಂಗಮಂದಿರದಲ್ಲಿ ಆಚರಿಸಲಾಗುತ್ತಿದೆ. ಆದರೆ, ಟಿಪ್ಪು ಜಯಂತಿಗೆ ಮಾತ್ರ ಅವಕಾಶ ಕೊಡುತ್ತಿಲ್ಲ. ಸಮುದಾಯದ ಒತ್ತಾಯದಂತೆ ರಂಗಮಂದಿರದಲ್ಲಿ ಜಯಂತಿ ಆಚರಿಸದಿದ್ದರೆ ಕಾರ್ಯಕ್ರಮ ಬಹಿಷ್ಕರಿಸುತ್ತೇವೆ’ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾಧಿಕಾರಿ ಜಿ.ಸತ್ಯವತಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಅವರು ಈಗಾಗಲೇ ಕಾರ್ಯಕ್ರಮದ ಸ್ಥಳ ನಿಗದಿಪಡಿಸಿದ್ದು, ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಅಂತಿಮ ಕ್ಷಣದಲ್ಲಿ ಕಾರ್ಯಕ್ರಮದ ಸ್ಥಳ ಬದಲಿಸಿದರೆ ಕಾನೂನು ಸುವ್ಯವಸ್ಥೆ ಪಾಲನೆ ಕಷ್ಟವಾಗುತ್ತದೆ. ಆದ ಕಾರಣ ಪೂರ್ವ ನಿಗದಿಯಂತೆ ಆಲ್‌ ಅಮೀನ್‌ ಮೈದಾನದಲ್ಲೇ ಕಾರ್ಯಕ್ರಮ ನಡೆಸಿ ಎಂದು ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌, ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಶಾಸಕ ವರ್ತೂರು ಪ್ರಕಾಶ್‌ ಕಾರ್ಯಕ್ರಮದ ಸ್ಥಳದ ವಿಷಯವಾಗಿ ಮುಸ್ಲಿಂ ಮುಖಂಡರು ಮತ್ತು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿದ್ದು, ಗೊಂದಲ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.