ADVERTISEMENT

ಕ್ರೈಸ್ತರ ಮೇಲಿನ ಮೊಕದ್ದಮೆ ವಾಪಸ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:10 IST
Last Updated 18 ಫೆಬ್ರುವರಿ 2011, 18:10 IST

ಬೆಂಗಳೂರು: ರಾಜ್ಯದ ವಿವಿಧೆಡೆ 2008ರಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 338 ಕ್ರೈಸ್ತ ಧರ್ಮೀಯರ ವಿರುದ್ಧ ದಾಖಲಿಸಿರುವ 36 ಕ್ರಿಮಿನಲ್ ಮೊಕದ್ದಮೆಗಳನ್ನು ಶೀಘ್ರದಲ್ಲಿ ಹಿಂದಕ್ಕೆ ಪಡೆಯಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ ಪ್ರಕಟಿಸಿದರು.

ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ವಿಚಾರಣಾ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿರುವ ಕರ್ನಾಟಕ ಸಂಯುಕ್ತ ಕ್ರೈಸ್ತರ ಮಾನವ ಹಕ್ಕುಗಳ ವೇದಿಕೆ ಪ್ರತಿನಿಧಿಗಳ ಜೊತೆ ಶುಕ್ರವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

‘ಚರ್ಚ್‌ಗಳ ಮೇಲೆ ದಾಳಿ ನಡೆದ ಸಮಯದಲ್ಲಿ ಕ್ರೈಸ್ತ ಧರ್ಮೀಯರ ವಿರುದ್ಧ 36 ಪ್ರಕರಣಗಳನ್ನು ದಾಖಲಿಸಲಾಗಿತ್ತು. 338 ಜನರನ್ನು ಆರೋಪಿಗಳು ಎಂದು ಹೆಸರಿಸಲಾಗಿತ್ತು. ಈ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯದ ಬಿಷಪ್‌ಗಳು ಮಾಡಿಕೊಂಡಿರುವ ಮನವಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ’ ಎಂದರು.
‘36 ಮೊಕದ್ದಮೆಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸುವಂತೆ ತಕ್ಷಣವೇ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇನೆ. ಕಾನೂನಿನ ಪ್ರಕಾರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವ ಮಂಡಿಸಿ, ಅನುಮೋದನೆ ಪಡೆದ ಬಳಿಕ ಈ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು’ ಎಂದು ಹೇಳಿದರು.

ವಿಶೇಷ ಘಟಕ: ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿ ತಡೆಯಲು 24 ಗಂಟೆ ನಿರಂತರವಾಗಿ ಸೇವೆ ಒದಗಿಸುವ ವಿಶೇಷ ಪೊಲೀಸ್ ಘಟಕ ಅಸ್ತಿತ್ವಕ್ಕೆ ತರುವಂತೆ ವೇದಿಕೆ ಮನವಿ ಮಾಡಿದೆ. ಶೀಘ್ರದಲ್ಲಿ ವಿಶೇಷ ಘಟಕ ಸ್ಥಾಪಿಸಲಾಗುವುದು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್.ಟಿ.ರಮೇಶ್ ಅವರಿಗೆ ಸೂಚನೆ ನೀಡಲಾಗಿದೆ ಎಂದರು. ‘ಬಿಷಪ್‌ಗಳ ಬೇಡಿಕೆಯನ್ನು ಪರಿಶೀಲನೆ ನಡೆಸಿದ ಬಳಿಕ ಈ ಬೇಡಿಕೆಗಳನ್ನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿಬಿಐ ತನಿಖೆ ಅಸಾಧ್ಯ’: ಚರ್ಚ್‌ಗಳ ಮೇಲಿನ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವೇದಿಕೆ ಒತ್ತಾಯಿಸಿದೆ. ಆದರೆ ಹಿಂದಿನ ಯಾವುದೇ ಸರ್ಕಾರಗಳೂ, ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ ಉದಾಹರಣೆ ಇಲ್ಲ. ಇಂತಹ ಸಂದರ್ಭದಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಅಸಾಧ್ಯ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದರು.

ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ ವಿಚಾರಣಾ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಬಿಷಪ್‌ಗಳು ಒತ್ತಾಯಿಸಿದ್ದಾರೆ. ಆದರೆ ವರದಿಯ ಕೆಲವು ಅಂಶಗಳು ಮಾತ್ರ ಬಹಿರಂಗವಾಗಿವೆ. ಸಂಪೂರ್ಣ ವರದಿ 1,800 ಪುಟಗಳಷ್ಟಿದೆ. ಅದನ್ನು ಗೃಹ ಇಲಾಖೆ ಪರಿಶೀಲಿಸುತ್ತಿದೆ. ಬಳಿಕ ವರದಿಯನ್ನು ಸಂಪುಟ ಸಭೆಯ ಮುಂದಿಡಲಾಗುವುದು. ಆ ನಂತರ ವಿಧಾನಮಂಡಲದಲ್ಲಿ ಮಂಡಿಸಲಾಗುವುದು. ಈಗಲೇ ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.

ರಾಜ್ಯವ್ಯಾಪಿ ಧರಣಿ: ನಿಯೋಗದ ನೇತೃತ್ವ ವಹಿಸಿದ್ದ ವೇದಿಕೆಯ ಅಧ್ಯಕ್ಷ ಹಾಗೂ ಬೆಂಗಳೂರು ಆರ್ಚ್ ಬಿಷಪ್ ಬರ್ನಾಡ್ ಮೋರಸ್, ‘ಗೃಹ ಸಚಿವರು ಸಮಾಧಾನದಿಂದ ನಮ್ಮ ಅಹವಾಲು ಆಲಿಸಿದ್ದಾರೆ. ಸರ್ಕಾರ ಸೋಮಶೇಖರ ಆಯೋಗದ ವರದಿಯನ್ನು ತಿರಸ್ಕರಿಸುತ್ತದೆ ಎಂಬ ವಿಶ್ವಾಸವಿದೆ. ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಧರಣಿ ನಡೆಸಲಾಗುವುದು’ ಎಂದರು.

‘ಕ್ರೈಸ್ತ ಧರ್ಮೀಯರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ಗೃಹ ಸಚಿವರು ಒಪ್ಪಿಕೊಂಡಿರುವುದು ನಮಗೆ ಸಂತಸ ಉಂಟುಮಾಡಿದೆ. ಇದೇ ರೀತಿ ಸತ್ಯಕ್ಕೆ ದೂರವಾದ ಅಂಶಗಳುಳ್ಳ ಆಯೋಗದ ವಿಚಾರಣಾ ವರದಿಯನ್ನು ತಿರಸ್ಕರಿಸುವ ಮೂಲಕ ನಮ್ಮ ಹಕ್ಕುಗಳನ್ನು ಎತ್ತಿ ಹಿಡಿಯಬೇಕು’ ಎಂದು ಆಗ್ರಹಿಸಿದರು.
ಬೆಂಗಳೂರಿನ ಸಿಎಸ್‌ಐ ಚರ್ಚ್‌ನ ಮಾಡರೇಟರ್ ವಸಂತಕುಮಾರ್, ಮಂಗಳೂರಿನ ಆರ್ಚ್ ಬಿಷಪ್ ಅಲೋಷಿಯಸ್ ಪಾಲ್ ಡಿಸೋಜಾ ಸೇರಿದಂತೆ ವಿವಿಧ ಜಿಲ್ಲೆಗಳ 19 ಕ್ರೈಸ್ತ ಧಾರ್ಮಿಕ ಮುಖಂಡರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.