
ಬೆಂಗಳೂರು: ‘ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್’ ಕೃತಿಯ ಬಗ್ಗೆ ಕೊಡವರಿಗೆ ಸಂಬಂಧವೇ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದು ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ಬಾರದಂತೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಸಾಹಿತ್ಯ ಸಮ್ಮೇಳನಕ್ಕೆ ಖಂಡಿತವಾಗಿಯೂ ಹೋಗುತ್ತೇನೆ’ ಎಂದು ಹಿರಿಯ ಲೇಖಕ ಕೋ.ಚೆನ್ನಬಸಪ್ಪ ಹೇಳಿದರು.
ಈ ಕೃತಿಯಲ್ಲಿ ‘ಕೊಡವರನ್ನು ವಿದೇಶಿಯರು’ ಎಂದು ಅವಮಾನಿಸಲಾಗಿದೆ ಎಂದು ಆರೋಪಿಸಿ ಮಡಿಕೇರಿಯಲ್ಲಿ ಇತ್ತೀಚೆಗೆ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಲು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಚರಿತ್ರೆಯನ್ನು ಸಂಗ್ರಹಿಸಿಕೊಡುವ ಕೆಲಸ ಮಾಡಿದ್ದು ನ್ಯಾಯಾಧೀಶನಂತೆ ನಿಷ್ಪಕ್ಷಪಾತವಾಗಿ ಕೃತಿಯನ್ನು ಸಂಪಾ ದಿಸಿದ್ದೇನೆ. ಹಿಂಪಡೆಯುವಂತಹ ಬರಹವನ್ನು ನಾನು ಬರೆದೂ ಇಲ್ಲ, ಹಿಂಪಡೆಯುವುದೂ ಇಲ್ಲ’ ಎಂದರು.
ಗೆಜೆಟಿಯರ್ ಮಾಹಿತಿ: ಹಿರಿಯ ಬರಹಗಾರರ ಪ್ರೊ.ಜಿ.ರಾಮಕೃಷ್ಣ ಮಾತನಾಡಿ, ‘ಕೊಡವರನ್ನು ಅವಮಾನಿಸುವಂತೆ ಕೋ.ಚೆನ್ನಬಸಪ್ಪ ಅವರು ಕೃತಿಯಲ್ಲಿ ಏನನ್ನೂ ಬರೆದಿಲ್ಲ. ಮೈಸೂರು ಸಂಸ್ಥಾನದ ಗೆಜೆಟಿಯರ್ನಲ್ಲಿ ನೀಡಲಾಗಿರುವ ಮಾಹಿತಿಗಳನ್ನು ಕೋ.ಚೆ ಅನುವಾದಿಸಿದ್ದಾರೆ ಮತ್ತು ಅನುವಾದದ ಮೂಲವನ್ನೂ ಉಲ್ಲೇಖಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.
‘ಕೊಡವರು ವಿದೇಶಿಯರು ಎಂಬ ಅಭಿಪ್ರಾಯವನ್ನು ಅವರು ಮಂಡಿಸಿಲ್ಲ. ಕೊಡವರು ಆರ್ಯರಿಗಿಂತಲೂ ಮೊದಲು ಬಂದವರು ಎಂದು ಅವರ ವೈಶಿಷ್ಟ್ಯವನ್ನು ಉಲ್ಲೇಖಿಸಿದ್ದಾರೆ’ ಎಂದರು. ‘ಕೃತಿಯನ್ನು ಓದದೆ, ಪರಿಶೀಲಿಸದೆ ತಪ್ಪಾಗಿ ಅರ್ಥೈಸುವುದರ ಮೂಲಕ ಲೇಖಕರ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ಚರ್ಚೆಗೆ ಒಳಗಾಗಬೇಕಾದ ಬರಹದ ವಿರುದ್ಧ ಪ್ರತಿಭಟನೆ, ಮುಟ್ಟುಗೋಲು ಮುಂತಾದ ನಡೆಗಳು ಸ್ವಾಗತಾರ್ಹವಲ್ಲ. ಸಾಹಿತ್ಯವನ್ನು ಪೂರ್ವಾಗ್ರಹವಿಲ್ಲದೆ ಓದುವಂತಹ ಸಂಸ್ಕೃತಿ ಕ್ಷೀಣಿಸುತ್ತಿದ್ದು ಬೌದ್ಧಿಕ ವಾತಾವರಣ ಕಲುಷಿತಗೊಳ್ಳುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವಿದ್ವತ್ ವಲಯದಿಂದ ನಡೆಯುತ್ತಿದೆ. ಅದರ ಬದಲು ಕೃತಿಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಕೃತಿಯನ್ನು ರಚಿಸಲಿ. ಪುಸ್ತಕವನ್ನು ಪರಾಮರ್ಶೆಗೆ ಒಳಪಡಿಸಿ ಸಾಹಿತ್ಯ ಸಮ್ಮೇಳನವು ಶಾಂತಿಯುತವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು’ ಎಂದರು.
ವಿಮರ್ಶಕ ಗೋಪಾಲರಾಯ, ‘ಚರಿತ್ರೆಯನ್ನು ದ್ವೇಷ ಬಿತ್ತುವ ಮೂಲಕ ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ’ ಎಂದರು. ನವಕರ್ನಾಟಕ ಪಬ್ಲಿಕೇಷನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ರಾಜಾರಾಂ ಇದ್ದರು.
ಪ್ರತಿಭಟನೆ ಖಚಿತ
ಸರ್ಕಾರದಿಂದ ಅನುದಾನ ಪಡೆದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕೋ. ಚೆನ್ನಬಸಪ್ಪ ಅವರಿಗೆ ಅವಕಾಶ ನೀಡುವುದನ್ನು ನಾನು ಖಂಡಿಸುತ್ತೇನೆ .
ಸರಿಯಾಗಿ ಸಂಶೋಧನೆ ನಡೆಸದೆ ತಮಗೆ ಅನಿಸಿದ್ದನ್ನು ಬರೆದು ಒಂದು ಸಮುದಾಯವನ್ನು ಹೀಗಳೆದಿರುವ ಕೋ.ಚೆ. ಅವರ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸುವುದು ಖಚಿತ.
– ಅಡ್ಡಂಡ ಕಾರ್ಯಪ್ಪ, (ರಂಗಕರ್ಮಿ ಮತ್ತು ಸಾಹಿತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.