ADVERTISEMENT

ಖೇಣಿ ನಾಮಪತ್ರಕ್ಕೆ ತಕರಾರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ಖೇಣಿ ನಾಮಪತ್ರಕ್ಕೆ ತಕರಾರು
ಖೇಣಿ ನಾಮಪತ್ರಕ್ಕೆ ತಕರಾರು   

ಬೀದರ್: ಕರ್ನಾಟಕ ಮಕ್ಕಳ ಪಕ್ಷದ ಸ್ಥಾಪಕ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕರಿಸಬಾರದು ಎಂದು ಕೋರಿ ಬೀದರ್ ದಕ್ಷಿಣ ಕ್ಷೇತ್ರದ ಇಬ್ಬರು ಪ್ರತಿಸ್ಪರ್ಧಿ ಅಭ್ಯರ್ಥಿಗಳು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಚುನಾವಣಾಧಿಕಾರಿಗಳು ಗುರುವಾರ ಮೂವರಿಗೂ ನೋಟಿಸ್ ಜಾರಿ ಮಾಡಿದರು.

ಪಕ್ಷೇತರ ಅಭ್ಯರ್ಥಿ ಟಿ.ಜೆ.ಅಬ್ರಹಾಂ ಅವರು ಖೇಣಿ ಅವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ, ಜೆಡಿಎಸ್ ಅಭ್ಯರ್ಥಿ ಬಂಡೆಪ್ಪಾ ಕಾಶೆಂಪುರ ಅವರು ಖೇಣಿ ಅವರು `ಲಾಭದಾಯಕ ಹುದ್ದೆ' ಹೊಂದಿದ್ದಾರೆ ಎಂದು ಆಕ್ಷೇಪಿಸಿ ಗುರುವಾರ ನಾಮಪತ್ರಗಳ ಪರಿಶೀಲನೆ ವೇಳೆ ಅರ್ಜಿಯನ್ನು ಸಲ್ಲಿಸಿದರು.

ಅರ್ಜಿ ಸ್ವೀಕರಿಸಿದ ಚುನಾವಣಾಧಿಕಾರಿ ನೀಲಕಂಠ ಅವರು, ಮೂವರೂ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿದರು. ದೂರು ಮತ್ತು ಸಮರ್ಥನೆಗೆ ಪೂರಕ ದಾಖಲೆಗಳನ್ನು ಶುಕ್ರವಾರ (ಏ. 19) ಬೆಳಿಗ್ಗೆ 11ರೊಳಗೆ ಹಾಜರುಪಡಿಸಲು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ಮೂವರೂ ಹಾಜರುಪಡಿಸಿರುವ ದಾಖಲೆಗಳನ್ನು ಪರಿಶೀಲಿಸಿ ಖೇಣಿ ಅವರ ನಾಮಪತ್ರ ಸಿಂಧುತ್ವವನ್ನು ಕುರಿತು ತೀರ್ಮಾನ ಪ್ರಕಟಿಸುವ ನಿರೀಕ್ಷೆಯಿದೆ.

ನಾಮಪತ್ರಗಳ ಪರಿಶೀಲನೆ ವೇಳೆ ಹಾಜರಿದ್ದ ಖೇಣಿ ಅವರು ಸುದ್ದಿಗಾರರ ಜೊತೆಗೆ ಮಾತನಾಡಿ `ರಾಜಕೀಯ ದುರುದ್ದೇಶದಿಂದ ತಕರಾರು ಸಲ್ಲಿಸಲಾಗಿದೆ. ನಾನು ಭಾರತೀಯ ಪೌರ. ಈ ಬಗ್ಗೆ ಹೆಮ್ಮೆ ಇದೆ. ನನ್ನ ಬಳಿ ಪಾಸ್‌ಪೋರ್ಟ್ ಕೂಡಾ ಇದೆ. ನೋಟಿಸ್‌ಗೆ ಉತ್ತರವಾಗಿ ಪೂರಕ ದಾಖಲೆಗಳನ್ನು ನಾನು ಹಾಜರುಪಡಿಸಲಿದ್ದೇನೆ' ಎಂದರು.

ಅಬ್ರಹಾಂ ಅವರು ತಕರಾರು ಅರ್ಜಿಯಲ್ಲಿ, ಖೇಣಿ ಅವರು ಅಮೆರಿಕದ ಪೌರತ್ವ ಹೊಂದಿದ್ದು, ಅಲ್ಲಿ ಅನೇಕ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ, ಅವರ ನಾಮಪತ್ರ ಅಂಗೀಕಾರ ಮಾಡಬಾರದು ಎಂದಿದ್ದಾರೆ. ಆರೋಪಕ್ಕೆ ಪೂರಕವಾಗಿ ಖೇಣಿ ಅವರ ಆಸ್ತಿ ಘೋಷಣೆ ಪತ್ರದಲ್ಲಿದ್ದ ಕೆಲ ಅಂಶಗಳನ್ನೇ ಉಲ್ಲೇಖಿಸಿದ್ದಾರೆ.

ಬಂಡೆಪ್ಪಾ ಕಾಶೆಂಪುರ ಅವರು ತಮ್ಮ ಅರ್ಜಿಯಲ್ಲಿ, `ನೈಸ್ ಸಂಸ್ಥೆಯು ರಸ್ತೆ, ಸೇತುವೆ ನಿರ್ಮಾಣದ ಗುತ್ತಿಗೆಯನ್ನು ರಾಜ್ಯ ಸರ್ಕಾರದಿಂದ ಪಡೆದು ನಿರ್ವಹಿಸಲಿದೆ. ಖೇಣಿ ಅವರು ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹೀಗಾಗಿ, ಇದು ಲಾಭದಾಯಕ ಹುದ್ದೆ ವ್ಯಾಪ್ತಿಗೆ ಬರಲಿದೆ' ಎಂಬ ವಾದವನ್ನು ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT