ADVERTISEMENT

ಗಂಡಾಗುಂಡಿ...

ಹಣಾಹಣಿ ಹಾಸ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 18:04 IST
Last Updated 3 ಏಪ್ರಿಲ್ 2013, 18:04 IST

ಕೈಗಡ ಸಾಲ ಕೇಳಲು, ಗೆಳೆಯ ಭರಮಪ್ಪನ ಮನೆ ಪ್ರವೇಶಿಸುತ್ತಿದ್ದಂತೆ, ಗಂಡ ಹೆಂಡತಿ ಜಗಳ ಅಂತಿಮ ಹಂತಕ್ಕೆ ಬಂದಂಗ್ಹ ಕಾಣತ್ತಿತ್ತು.

ಪತಿ, ಪತ್ನಿ ಧ್ವನಿ ತಾರಕಕ್ಕೆ ಏರಿತ್ತು. ಸದನದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ಸದಸ್ಯರು ತೋಳೆರಿಸಿ ಕಾಲು ಕೆದರಿ ಜಗಳಕ್ಕೆ ಇಳಿದಾಗಿನಂತಹ ಸನ್ನಿವೇಶ ಸೃಷ್ಟಿಯಾದ ಸಂದರ್ಭದಲ್ಲಿಯೇ ನಾನು  ಮನೆ ಪ್ರವೇಶಿಸಿದ್ದ.

ಮನೆ ಬಾಗಿಲಲ್ಲಿ ಹಠಾತ್ತನೇ  ನನ್ನನ್ನು ನೋಡಿ ಅವರಿಬ್ಬರಿಗೂ ಗಾಬರಿಯಾದಂತಾಗಿ ಏನು ಹೇಳಬೇಕೆಂದು ತೋಚದೇ ನನ್ನನ್ನು ಒಳಗೆ ಬಾ ಎಂದು ಹೇಳುವುದನ್ನೂ ಮರೆತು, ಇಬ್ಬರೂ ಬ್ಬೆ ಬ್ಬೆ ಬ್ಬೆ ಎಂದು ಏನೇನೊ ಗೊಣಗತೊಡಗಿದರು. ಕಿವಿಗೊಟ್ಟರೂ ಅದೂ ಕಿವಿಗೆ ಬೀಳಲಿಲ್ಲ.

`ಏಯ್, ಏನ್ರೊ ನಿಮ್ಮ ಗದ್ದಲ. ಇನ್ನೂ  ಈಗರ ಬೆಳಗಾಗೇದ. ಆಗಲೇ ಜಗಳ ಸುರು ಹಚ್ಚಿಕೊಂಡಿರಲ್ಲ. ನಿಮ್ದು ಕೇರಳ ಮಂತ್ರಿ ತಲೆದಂಡ ಕೇಳಿದ ಪತಿ - ಪತ್ನಿ `ಹೊಡೆದಾಟ'ನೊ ಅಥವಾ ಕುಟುಂಬಗಳಿಗೂ ಹಬ್ಬಿದ ಬಿಜೆಪಿ - ಕೆಜೆಪಿ ಕಲಹಾನೊ. ಈ ಜಗಳದಾಗ ಜಳಕಾ - ಪಳಕಾನರ ಮಾಡಿರಿಲ್ಲ' ಎಂದೆ.

`ಏಯ್ ನಮ್ದು ಗಣೇಶ ಕುಮಾರ್‌ನ ಪರಸಂಗ ಹಗರಣ ಅಲ್ಲಪ. ನಮ್ಮದೇನಿದ್ದರೂ ಬಿಜೆಪಿ - ಕೆಜೆಪಿ ಕಲಹ' ಎಂದ ಭರಮಪ್ಪ.
`ಜಳಕ್ ಅಂತ್, ಜಳಕ್. ಮುಖಾನೊ ತೊಳ್ಕೊಲ್ಲದ ಹೊಂಟಾರ್ ನೋಡ್ರಿ. ನೀವ ಸ್ವಲ್ಪು ಇವ್ರಿಗೆ ಬುದ್ಧಿ ಹೇಳಿ'್ರ ಎಂದು  ಭರಮಪ್ಪನ ಭಾರ್ಯೆ ಕಸ್ತೂರಿ ಕೇಳಿಕೊಂಡಳು.

`ಏಯ್, ನೀ ಏನ್ ಸುದ್ದ ಅದಿ. ಇಷ್ಟೊತ್ತಾದ್ರೂ ಒಲ್ಯಾಗ್ ಬೆಕ್ ಮಲ್ಕೊಂಡದ.  ನಾಷ್ಟಾ  ತಯಾರಿನೂ ಮಾಡದ ಹೊಸ ಸೀರಿ ಸುತ್ತಕೊಂಡು ನಿಂತಿಯಲ್ಲ. ನಿನಗ ಬುದ್ಧಿ ಬ್ಯಾಡೇನ್' ಎಂದು ಭರಮಪ್ಪ ಸಿಟ್ಟು ಮಾಡಿದ.

`ಸ್ವಲ್ಪು ಬಿಡಿಸಿ ಹೇಳಪಾ. ಇಬ್ರೂ ಒಬ್ಬರಿಗೊಬ್ಬರ ಮ್ಯಾಲ್ ಒಗಟಾಗಿ ಆರೋಪ ಮಾಡಿದ್ರ ನಂಗೇನ್ ಗೊತ್ತ ಆಗ್ತೈತಿ' ಅಂದೆ.
`ನೋಡ್ರಿ ರಾಮಣ್ಣ, ನಾನು ಬಿಜೆಪಿ ಟಿಕೆಟ್‌ನಿಂದ `ಝಡ್‌ಪಿ'ಗೆ ಆರಿಸಿ ಬಂದಿದ್ದು ನಿಮ್ಗೂ ಗೊತ್ತೈತಿ. ಆ ಪಕ್ಷದ ಪರವಾಗಿ ಪ್ರಚಾರ ಮಾಡೂದು ನನ್ನ ಧರ್ಮ ಐತಿ ಹೌದಲ್ರಿ. ಇವರು ಈಗ `ಕೆಜಿಪಿ' ಪರ ಪ್ರಚಾರಕ್ಕ ಹೋಕ್ತೀನಿ ಎಂದು ವರಾತ್ ಹಚ್ಚಾರ್. ಇದ್ರಾಗ ಯಾರ‌್ದ ತಪ್ಪ ಐತಿ ಹೇಳ್ರಿ' ಎಂದು  ಕಸ್ತೂರಿ ಕೇಳಿದಳು.

`ನೀ ಹೇಳೂದು ಸರಿ ಅದ ಬಿಡವ್ವಾ' ಎಂದು ನಾನು ತಿಪ್ಪೆ ಸಾರ್ಸಾಕ್ ನೋಡ್ತಿದ್ರ...
`ಏಯ್ ಆಕಿ ಮಾತ್ ಏನ್ ಕೇಳ್ತಿ. ನಾನ  ನಿಂತ್ ಆಕೀನ ಗೆಲ್ಸಿನಿ. ಈಗ ನಾನು ಪಾರ್ಟಿ ಬದಲಿಸೀನಿ. ನಾನು ಹೇಳಿದ್ಹಂಗ್ ಆಕಿ ಕೇಳಬೇಕು. ಕೆಜಿಪಿ ಪ್ರಚಾರಕ್ಕ ಬರಬೇಕು. ಇಲ್ಲಂದ್ರ ಮನ್ಯಾಗ್ ಕುಂದ್ರಬೇಕು. ಬಿಜೆಪಿ  ಪರ ಬಿಲ್‌ಕುಲ್ ಪ್ರಚಾರ ಮಾಡಬಾರ್ದು' ಇದು ನನ್ನ ಕೊನೆ ಮಾತು ಎಂದು ಭರಮಪ್ಪ ಮೀಸಿ ತಿರುವಿದ.

`ಅಯ್ಯ ಕಂಡೀನೇಳ್ ನಿನ್ನ ಪೌರುಷ. ನಾನು ಛಂದ್ಹಂಗ್ ಇಳಕಲ್ ಸೀರಿ ಉಟ್ಕೊಂಡು ಪೌಡ್ರು ಹಚ್‌ಕೊಂಡು ನಂಗ್ ಓಟು ಕೊಡ್ರಿ, ಬಿಜೆಪಿ ಗೆಲ್ಲಿಸಿ ಎಂದು ಸಿಕ್ಕ ಸಿಕ್ಕವರ ಕಾಲು - ಕೈ ಹಿಡಿದು  ವೋಟ್ ಕೇಳಿದ್ದಕ್ಕ ನಾನು ಗೆದ್ದಿರೋದು. ನನ್ನ ಹಿಂದ್ ಚೆಡ್ಡಿ ಪಡ್ಡೆ ಹೈಕಳ ದೊಡ್ಡ ದಂಡೇ ಇರತಿತ್ತು. ಅದ್ಕ ಗೆದ್ದೀನಿ. ಇವ್ನ ನಂಬಿಕೊಂಡಿದ್ರ ಠೇವಣಿನ ಜಪ್ತ್ ಆಗತಿತ್ತು' ಎಂದು ಕಸ್ತೂರಿ ಮೂದಲಿಸಿದಳು.

`ನೋಡು, ನಂಗ್ ಸಿಟ್ ತರಿಸ್‌ಬ್ಯಾಡ. ಕೆಜೆಪಿ ಹೊಸಾ ಪಕ್ಷ, ಯಡಿಯೂರಪ್ಪನ್ನೋರು ಹೊಸ ಪ್ರಾದೇಶಿಕ ಪಕ್ಷ ಕಟ್ಟಾಕ್ ಹೊಂಟಾರ್. ಬಿಜೆಪಿಯಲ್ಲಿದ್ದಾಗ ನಮಗೆಲ್ಲಾ ಸಾಕಷ್ಟ್ `ಅನುಕೂಲ' ಮಾಡಿಕೊಟ್ಟಾರ್. ನಾನು ಬೊಮ್ಮಾಯಿ, ಉಮೇಶ್ ಕತ್ತಿ ಅವರಂಗ ದ್ರೋಹಿ ಅಲ್ಲ. ನಾನೊಬ್ಬ ಬಿಎಸ್‌ವೈ ಅವರ ನಿಷ್ಠಾವಂತ ಕಾರ್ಯಕರ್ತ ಅನ್ನೋದನ್ನ ತಿಳ್ಕೊ' ಎಂದು ಭಾಷಣ ಬಿಗಿದ.
`ಕೆಜೆಪಿಯಲ್ಲಿ ಪ್ರಚಾರಕ್ಕ ಹೋದ್ರ ಕೈತುಂಬ ರೊಕ್ಕಾ ಕೊಡ್ತಾರಂತ' ಮೊನ್ನೆ ರಾತ್ರಿ ಹೇಳಾಕತ್ತಿದ್ದಿ, ಈಗ ಯಾಕ್ ಉಲ್ಟಾ ಹೊಡೀತಿ. ತಮ್ಮ ಕಿಸೆ ಖಾಲಿ ಆಗೈತಿ ಎಂದು ಯಡಿಯೂರಪ್ಪನೋರ್ ಹೇಳಿಕೊಂಡಾರಲ್ಲ ಕೇಳಿಲ್ಲೇನ್' ಎಂದು ತಿರುಗೇಟು ನೀಡಿದಳು ಕಸ್ತೂರಿ.

ಗುಟ್ಟು ರಟ್ಟಾದ ಸಿಟ್ಟಿನಾಗ ನನ್ನತ್ತ ತಿರುಗಿ, ಇದಕ್ಕೇನರ ಪರಿಹಾರ ಹೇಳಪಾ' ಎಂದು ದೈನೇಸಿಯಿಂದ ಬೇಡಿಕೊಂಡ.
`ಅಲ್ಲೊ, ಮಾರಾಯ, ಗಂಡ ಹೆಂಡಿರ ಜಗಳ ಉಂಡು ಮಲಗೋತನಕ ಅಂತಾರಪಾ. ನಿಮ್ಮನ್ಯಾಗ್ ನೋಡಿದ್ರ, ಮಲಗಿ ಎದ್ದ ಕೂಡಲೇ ಜಗಳ ಸುರು ಆಗೈತಲ್ಲ. ನೀವಿಬ್ರೂ ಒಂದೊಂದು ಪಕ್ಷದ ಹಿಂದ್ ಹೋದ್ರ, ಈ ಜಗಳ ಬಗೆ ಹರಿಯೊ ಮಾತ ಇಲ್ಲ ಬಿಡು. ನೀವಿಬ್ಬರೂ ಎರಡೂ ಪಾರ್ಟಿ ಪರ್ಲ್ ಹರಕೊಂಡು ಚುನಾವಣೆಗೂ ಮೊದಲ ಒಂದ್ ಪಾರ್ಟಿಯೊಳಗೆ ವಿಲೀನ ಆಗಬೇಕು.

ಇಲ್ಲಾಂದ್ರ ಡಿ. ವಿ. ಸದಾನಂದಗೌಡ್ರು ಹೇಳಿದ್ಹಂಗ್, ಕೆಜೆಪಿಗೆ ಇದ ಕೊನೆ ಎಲೆಕ್ಷನ್ ಆಗಬೇಕು' ಎಂದು ಹೇಳಿ ಹೊರಡುತ್ತಿದ್ದಂತೆ, ಗಂಡ ಹೆಂಡತಿ ಕಣ್ ಕಣ್ ಬಿಟ್ಟುಕೊಂಡೆ, ಇಂವಾ ನಮ್ಮ  ಸಮಸ್ಯೆ ಪರಿಹರಿಸಿದನೋ ಇಲ್ಲಾ  ಇನ್ನಷ್ಟು ಬಿಗಡಾಯಿಸಿದನೋ ಎನ್ನುವ ಗೊಂದಲದಲ್ಲಿಯೇ ನನ್ನನ್ನು ಬರಿಗೈಯಲ್ಲಿ ಸಾಗ ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.