ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಕೊಟ್ಟಿರುವ ವರದಿ ಪರಿಶೀಲನೆ ಭರದಿಂದ ಸಾಗಿದೆ. ಸೋಮವಾರ ಕೂಡ ಎಂಟು ಗಂಟೆಗಳ ಕಾಲ ವರದಿ ಬಗ್ಗೆ ಚರ್ಚಿಸಲಾಗಿದೆ.
ವರದಿ ಪರಿಶೀಲಿಸಿ, ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಮೂವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು.
ಈ ಸಮಿತಿ ಇದುವರೆಗೂ ನಾಲ್ಕು ಭಾರಿ ಸಭೆ ನಡೆಸಿದ್ದು, ಈ ತಿಂಗಳ ಒಳಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.
ಲೋಕಾಯುಕ್ತ ವರದಿಯ ಪ್ರಕಾರ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದ್ದು, ಆ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳಿಗೆ ವಹಿಸಲಾಗಿದೆ. ಇದಲ್ಲದೆ, ಗಣಿ ಅಕ್ರಮ ತಡೆಯಲು ಯಾವ ರೀತಿಯ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಸೋಮವಾರ ಕೇವಲ ಗಣಿ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು ಸೇರಿದಂತೆ ಇತರ ಹಿರಿಯ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಅವರಿಗೆ ಲೋಕಾಯುಕ್ತ ವರದಿ ಪ್ರಕಾರ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಲೋಕಾಯುಕ್ತ ವರದಿಯಲ್ಲಿ ಗಣಿಧಣಿಗಳಿಂದ ಮಾಮೂಲಿ ಪಡೆಯುತ್ತಿದ್ದ ಅಧಿಕಾರಿಗಳ ಹೆಸರು ಅನೇಕ ಕಡೆ ಇಲ್ಲ. ಬದಲಿಗೆ ಹುದ್ದೆಗಳ ಹೆಸರು ಇದ್ದು, ಆ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ವಿವರ ಪತ್ತೆ ಹಚ್ಚಲು ಸೂಚಿಸಲಾಗಿದೆ. ಆ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದೂ ಹೇಳಲಾಗಿದೆ.
ಜೈರಾಜ್ ಅಲ್ಲದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್, ಮೀರಾ ಸಕ್ಸೇನಾ, ಶಮೀಮ್ ಬಾನು ಸಭೆಯಲ್ಲಿ ಹಾಜರಿದ್ದರು. ಮಂಗಳವಾರ ಕೂಡ ಸಭೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.