ADVERTISEMENT

ಗಣಿಗಾರಿಕೆ: ನಿರ್ಬಂಧ ಬೇಡ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 18:30 IST
Last Updated 8 ಫೆಬ್ರುವರಿ 2012, 18:30 IST

ನವದೆಹಲಿ: ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಗಾರಿಕೆ ಮೇಲೆ ನಿರ್ಬಂಧ ಹೇರಬಾರದು. ಇಂತಿಷ್ಟೇ ಪ್ರಮಾಣದಲ್ಲಿ ಕಬ್ಬಿಣದ ಅದಿರು ಹೊರತೆಗೆಯುವಂತೆ ಮಿತಿ ಹಾಕಬಾರದು ಎಂದು ಮನವಿ ಮಾಡಿ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ಪ್ರಮಾಣ ಪತ್ರ ಸಲ್ಲಿಸಿದೆ.

ರಾಜ್ಯದಲ್ಲಿ ಗಣಿಗಾರಿಕೆಗೆ ನಿರ್ಬಂಧ ಹಾಕಬೇಕು. ವಾರ್ಷಿಕ 3 ಕೋಟಿ ಟನ್ ಅದಿರಿಗೆ ಮಾತ್ರ ಅನುಮತಿ ನೀಡಬೇಕು. ಎರಡೂವರೆ ಕೋಟಿ ಟನ್ ಬಳ್ಳಾರಿ ಜಿಲ್ಲೆಯಲ್ಲಿ, ಐನೂರು ಕೋಟಿ ಟನ್ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೊರ ತೆಗೆಯಲು ಅವಕಾಶ ಇರಬೇಕು ಎಂದು ಸುಪ್ರೀಂಕೋರ್ಟ್‌ನ ಉನ್ನತಾಧಿಕಾರ ಸಮಿತಿ (ಸಿಇಸಿ) ಮಾಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಮಾಣ ಪತ್ರ ಸಲ್ಲಿಸಿದೆ.

 ಸರ್ಕಾರ ಆರ‌್ಸೆಲಾರ್ ಮಿತ್ತಲ್, ಪೋಸ್ಕೊ, ಟಾಟಾ ಸ್ಟೀಲ್ಸ್ ಸೇರಿದಂತೆ ವಿವಿಧ ಕಂಪೆನಿಗಳ ಜತೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಕಂಪೆನಿಗಳು ರಾಜ್ಯದಲ್ಲಿ ಉಕ್ಕು ಉದ್ಯಮಗಳನ್ನು ಸ್ಥಾಪಿಸುತ್ತಿವೆ. ಈ ನಿಟ್ಟಿನಲ್ಲಿ ಸುಮಾರು 2.50ಲಕ್ಷ ಕೋಟಿ ಬಂಡವಾಳ ಹರಿದು ಬರುತ್ತಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ. ದೇಶದಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಕಂದರ ಏರ್ಪಟ್ಟಿದೆ.
 

ಯೋಜನಾ ಆಯೋಗವೂ ಉಕ್ಕು ಉತ್ಪಾದನೆಯನ್ನು ಎರಡೂವರೆ ಪಟ್ಟು ಹೆಚ್ಚಿಸುವಂತೆ ಹೇಳಿದೆ. ಈ ಕಾರಣದಿಂದಾಗಿ ಗಣಿಗಾರಿಕೆಗೆ ಮಿತಿ ಹಾಕಬಾರದು. ಅಪರಿಮಿತ ಪ್ರಮಾಣದಲ್ಲಿ ಅದಿರು ಹೊರ ತೆಗೆಯಲು ಅನುಮತಿ ಕೊಡಬೇಕು ಎಂದು ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿದೆ.

ಸಿಇಸಿ ಅಕ್ರಮ ಗಣಿಗಾರಿಕೆಯಿಂದ ಪರಿಸರ ನಾಶವಾಗಿರುವ ಕುರಿತು ಕಳವಳ ವ್ಯಕ್ತಪಡಿಸಿದೆ. ಅರಣ್ಯವನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಲಿ (ಐಸಿಎಫ್‌ಆರ್‌ಇ) ಸಿದ್ಧಪಡಿಸಿರುವ ಯೋಜನೆ ಅನುಷ್ಠಾನಗೊಳಿಸುವಂತೆ ಶಿಫಾರಸು ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಕಳಕಳಿ ಇದೆ. ಯೋಜನೆ ಜಾರಿ ಕುರಿತು ಸರ್ಕಾರ ಕಾಳಜಿ ವಹಿಸಲಿದೆ ಎಂದು ಪ್ರಮಾಣ ಪತ್ರದಲ್ಲಿ ಭರವಸೆ ನೀಡಲಾಗಿದೆ.
 ಈ ಸಂಬಂಧ ರಾಜ್ಯ ಸರ್ಕಾರ ಸದ್ಯದಲ್ಲೇ ಮತ್ತೊಂದು ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಲಿದೆ. ಹಿರಿಯ ಐಎಎಸ್ ಅಧಿಕಾರಿ ಜೈರಾಜ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎಚ್.ಆರ್. ಶ್ರೀನಿವಾಸ್ ಅವರನ್ನೊಳಗೊಂಡ ಉಪ ಸಮಿತಿ ಹೆಚ್ಚುವರಿ ಪ್ರಮಾಣ ಪತ್ರ ಅಂತಿಮಗೊಳಿಸುತ್ತಿದೆ.

ಅಕ್ರಮ ಗಣಿಗಾರಿಕೆ ಪರಿಣಾಮ ಕುರಿತು ಅಧ್ಯಯನ ಮಾಡಿ ಪರಿಹಾರ ಸೂಚಿಸಲು ಪಿ.ವಿ. ಜಯಕೃಷ್ಣ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದೆ. ಈ ಸಮಿತಿ ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಅಂತಿಮ ವರದಿಯಲ್ಲಿ ವಾರ್ಷಿಕ 3 ಕೋಟಿ ಟನ್ ಅದಿರು ತೆಗೆಯಲು ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿದೆ. ಇದಕ್ಕೂ ಮೊದಲು ಐಸಿಎಫ್‌ಆರ್‌ಇ ಸಲ್ಲಿಸಿರುವ ವರದಿಯೂ ಇಂತಹದೇ ಶಿಫಾರಸು ಒಳಗೊಂಡಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಶುಕ್ರವಾರ ಸಿಇಸಿ ವರದಿ ಮತ್ತು ರಾಜ್ಯ ಸರ್ಕಾರದ ಪ್ರಮಾಣ ಪತ್ರವನ್ನು ಪರಿಶೀಲಿಸುವ ಸಾಧ್ಯತೆ ಇದೆ.

ಸಿಇಸಿ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಗಣಿಗಳೂ ಒಳಗೊಂಡಂತೆ 49 ಗಣಿ ಗುತ್ತಿಗೆ ರದ್ದು ಮಾಡಲು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT