ಬಳ್ಳಾರಿ: ಲೋಕಾಯುಕ್ತ, ಸಿಬಿಐ ತನಿಖೆ ಹಾಗೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ಪರಿಶೀಲನೆಯಿಂದ ಜಿಲ್ಲೆಯ ಗಣಿ ಮಾಲೀಕರ ನೆತ್ತಿಯ ಮೇಲೆ ‘ಅಕ್ರಮ ಗಣಿಗಾರಿಕೆ’ಯ ತೂಗು ಕತ್ತಿ ತೂಗುತ್ತಿರುವ ಬೆನ್ನಲ್ಲೇ, ಗಣಿ ಸಂಬಂಧಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೂ ಅದರ ಬಿಸಿ ಮುಟ್ಟಿದೆ.
ಅಂತೆಯೇ ಜಿಲ್ಲೆಯ ಹೊಸಪೇಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಮುಖ ಕಚೇರಿಯ ಅರ್ಧಕ್ಕೂ ಹೆಚ್ಚು ಸಿಬ್ಬಂದಿಯನ್ನು ಸರಕಾರ ಇತ್ತೀಚೆಗೆಷ್ಟೇ ಅನ್ಯ ಕಾರ್ಯ ನಿಮಿತ್ಯ (ಓಓಡಿ) ಎಂಬ ಕಾರಣವೊಡ್ಡಿ ಬೇರೆ ಜಿಲ್ಲೆಗಳಲ್ಲಿರುವ ಕಚೇರಿಗಳಿಗೆ ಸಾಮೂಹಿಕವಾಗಿ ಕಳುಹಿಸಿದೆ.
ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಯವರ ವರ್ಗಾವಣೆ ಆದ ಬೆನ್ನಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸಪೇಟೆ ಉಪನಿರ್ದೇಶಕರಾಗಿದ್ದ ಡಿ.ರಾಜು ಅವರನ್ನೂ ವರ್ಗಾವಣೆ ಮಾಡಿರುವ ಸರಕಾರ, ಅಲ್ಲಿಂದೀಚೆ ಹೊಸಪೇಟೆಯ ಕಚೇರಿಯಲ್ಲಿರುವ 32 ಸಿಬ್ಬಂದಿ ಪೈಕಿ 20 ಸಿಬ್ಬಂದಿಯನ್ನು ಚಿತ್ರದುರ್ಗ, ಬೆಂಗಳೂರು, ತುಮಕೂರು ಮತ್ತಿತರ ಕಚೇರಿಗಳಿಗೆ ಕಳುಹಿಸಿ, ಅಷ್ಟೇ ಪ್ರಮಾಣದ ಸಿಬ್ಬಂದಿಯನ್ನು ಹೊಸಪೇಟೆಗೆ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಯಾವುದಾದರೂ ಕಡತ ಬೇಕೆಂದರೂ ಆ ಹೊಸ ಸಿಬ್ಬಂದಿ ತಡಕಾಡುವಂತಾಗಿದೆ. ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲೇ ಬಳ್ಳಾರಿ ಜಿಲ್ಲೆಸು ಬಹುತೇಕ ಗಣಿ ಪ್ರದೇಶ ಇರುವುದರಿಂದ ಹೊಸಪೇಟೆಯಲ್ಲಿ ಪ್ರತ್ಯೇಕ ಉಪನಿರ್ದೇಶಕರ ಕಚೇರಿಯಿದ್ದು, ಅಲ್ಲೇ ಎಲ್ಲ ವ್ಯವಹಾರಗಳೂ ನಡೆಯುತ್ತಿವೆ. ಗಣಿಗಾರಿಕೆ ಪರವಾನಗಿ, ಅದಿರು ಸಾಗಣೆ ಲಾರಿಗಳ ಪರಿಶೀಲನೆ, ಮತ್ತಿತರ ಪ್ರಮುಖ ವ್ಯವಹಾರವನ್ನು ಈ ಕಚೇರಿಯ ಸಿಬ್ಬಂದಿಯೇ ನೋಡಿ ಕೊಳ್ಳುತ್ತಾರೆ.
ಆದರೆ, ಇದೇ ಮಾರ್ಚ್ 26 ಹಾಗೂ 27ರಂದು ಸಿಇಸಿ ತಂಡ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಒಂದು ವಾರ ಮೊದಲು ಕಚೇರಿಯ ಸಿಬ್ಬಂದಿ ಅದಲು- ಬದಲಾಗಿದ್ದಾರೆ. ಈ ಬೆಳವಣಿಗೆಯು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿವೆ.
ಹೊಸಪೇಟೆ ಕಚೇರಿಗೆ ಉಪನಿರ್ದೇಶಕ ಸ್ಥಾನಕ್ಕೆ ಡಾ.ಬಿ.ಎನ್. ಶಂಕರ್ ಅವರು ನಿಯೋಜನೆಗೊಂಡಿದ್ದು, ಅವರಂತೆಯೇ ಪ್ರಮುಖ ಸಹಾಯಕ ಸಿಬ್ಬಂದಿಯೆಲ್ಲ ಹೊಸಬರೇ ಆಗಿದ್ದಾರೆ. ಕಚೇರಿಗೆ ಹೋದವರೆಲ್ಲ ಹೊಸಮುಖಗಳನ್ನೇ ಕಂಡು ಬರುವಂತಾಗಿದ್ದು, ಯಾವುದಾದರೂ ಪ್ರಮುಖ ಕಡತವನ್ನು ಕೇಳಿದರೂ ಹೊಸ ಸಿಬ್ಬಂದಿ ತಡಕಾಡುವುದನ್ನು ನೋಡುವಂತಾಗಿದೆ.
ಹೊಸಪೇಟೆ ಕಚೇರಿಯಲ್ಲಿರುವ ಕಡತಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅವುಗಳನ್ನು ಹೊಂದಿಸಿ ಇಡುವುದರಲ್ಲೇ ಸಿಬ್ಬಂದಿಗೆ ಸುಸ್ತಾಗುತ್ತಿದೆ ಎನ್ನಲಾಗಿದೆ.
ಆಂಧ್ರಪ್ರದೇಶ ಸರಕಾರದ ಆದೇಶದ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ, ಸಚಿವ ಜಿ.ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ)ಗೆ ಜಿಲ್ಲೆಯ ಮಿಕ್ಕ ಗಣಿ ಮಾಲೀಕರು ಅದಿರನ್ನು ನೀಡಿರುವ ಬಗ್ಗೆ ಇತ್ತೀಚಗೆಷ್ಟೇ ಮಾಹಿತಿ ಕೇಳಿ ನೋಟಿಸ್ ನೀಡಿದ್ದರು.
ಆ ಬಗ್ಗೆ ಮಾಹಿತಿಯನ್ನೂ ಸಿಬ್ಬಂದಿ ನೀಡಿದ್ದರು. ತದನಂತರವಷ್ಟೇ ಬಹುತೇಕ ಸಿಬ್ಬಂದಿ ತಾತ್ಕಾಲಿಕ ಎಂಬಂತೆ ಬೇರೆ ಕಚೇರಿಗೆ ಕಾರ್ಯನಿಮಿತ್ತ ತೆರಳಿದ್ದು ವಿಶೇಷವಾಗಿದೆ.
ಯಾವುದೇ ಸಿಬ್ಬಂದಿಗೆ ಅಧಿಕೃತವಾಗಿ ವರ್ಗಾವಣೆ ಆದೇಶವನ್ನು ನೀಡಲಾಗಿಲ್ಲ. ಬದಲಿಗೆ, ಓಓಡಿ ಎಂಬ ನೆಪದಿಂದ ಬೇರೆಡೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಇಸಿ ಸದಸ್ಯರು ಭೇಟಿ ನೀಡಿದ ಸಂದರ್ಭ ಅಕ್ರಮ ಕುರಿತ ಮಾಹಿತಿ ದೊರೆಯದೇ ಇರಲಿ ಎಂಬ ಕಾರಣದಿಂದ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಸಿಬ್ಬಂದಿಯ ರಕ್ಷಣೆಗೆಂದೇ ಈ ಸಿಬ್ಬಂದಿಯನ್ನು ಬೇರೆಡೆ ಕಳುಹಿಸಲಾಗಿದೆ ಎಂದೂ ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.