ADVERTISEMENT

ಗಣಿ ಮಾಲೀಕರಿಗೆ ಸಿಬಿಐ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬಳ್ಳಾರಿ: ಆಂಧ್ರ- ಕರ್ನಾಟಕ ಗಡಿಯಲ್ಲಿರುವ ಓಬಳಾಪುರಂ ಬಳಿಯ ಆರು ಗಣಿ ಕಂಪೆನಿಗಳ ವಿರುದ್ಧದ ಗಡಿ ಮತ್ತು ಗಣಿ ಒತ್ತುವರಿ ಹಾಗೂ ರಾಜಸ್ವ ವಂಚನೆ ಆರೋಪಗಳ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರದ ಆದೇಶದ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ, ಜಿಲ್ಲೆಯ ಒಟ್ಟು 65 ಗಣಿಗಳ ಮಾಲೀಕರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪೆನಿ (ಓಎಂಸಿ) ಒಳಗೊಂಡಂತೆ ಓಬಳಾಪುರಂ ಭಾಗದ ಇತರ ಐದು ಗಣಿ ಕಂಪೆನಿಗಳಿಗೆ ಅದಿರನ್ನು ನೀಡಿದ್ದರ ಬಗ್ಗೆ ವಿವರ ಸಂಗ್ರಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಗಣಿ ಮಾಲೀಕರಿಗೆ ಈ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಸಿಬಿಐ ಇನ್‌ಸ್ಪೆಕ್ಟರ್ ಆಫ್ ಪೊಲೀಸ್ ಪಿ.ವಿ. ಸೀತಾರಾಮನ್ ಅವರು ಗಣಿ ಮಾಲೀಕರಿಗೆ ಪತ್ರ ಬರೆದು, ಒಟ್ಟು ಏಳು ರೀತಿಯ ವಿವರಗಳನ್ನು ನೀಡುವಂತೆ ಸೂಚಿಸಿದ್ದಾರೆ.

ADVERTISEMENT

1998ರಿಂದ ಈವರೆಗೆ ನಡೆಸಿರುವ ಅದಿರಿನ ರಫ್ತು ವಿವರ, ಗಣಿ ಗುತ್ತಿಗೆ ಮತ್ತು ಪರ್ಮಿಟ್ ವಿವರ, ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ಗೆ ಸಲ್ಲಿಸಲಾದ ಮಾಸಿಕ ಹಾಗೂ ವಾರ್ಷಿಕ ರಿಟರ್ನ್ಸ್ ವಿವರ, ಕಂಪನಿಯ ನಿಯಮಾವಳಿ, ನಿರ್ದೇಶಕರ ವಿವರ ಹಾಗೂ 1998ರಿಂದ ಈವರೆಗಿನ ಬ್ಯಾಲನ್ಸ್ ಶೀಟ್‌ಗಳನ್ನು ಇದೇ 18ರೊಳಗೆ ಸಿಬಿಐಗೆ ಸಲ್ಲಿಸುವಂತೆ ತಿಳಿಸಿರುವ ಅವರು, ಈ ಪತ್ರವನ್ನು ನೋಟಿಸ್ ಎಂದೇ ಪರಿಗಣಿಸುವಂತೆ ಸೂಚಿಸಿದ್ದಾರೆ.

ಪರಿಶೀಲನೆ: ಸಿಬಿಐನ ಕೆಲವು ಅಧಿಕಾರಿಗಳ ತಂಡವು ಶುಕ್ರವಾರ ಜಿಲ್ಲೆಯ ಹೊಸಪೇಟೆಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಗೆ ಭೇಟಿ ನೀಡಿ, ಕೆಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸಿದೆ.

ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳಲ್ಲಿರುವ ಗಣಿಗಾರಿಕೆ ಪ್ರದೇಶಗಳ ವಿವರ ಹಾಗೂ ನಕ್ಷೆಯನ್ನು ನಾಲ್ಕು ದಿನಗಳ ಅವಧಿಯಲ್ಲಿ ನೀಡುವಂತೆ ಇಲಾಖೆಯ ಅಧಿಕಾರಿಗಳನ್ನು ಸಿಬಿಐ ತಂಡ ಕೋರಿದೆ.

ಓಬಳಾಪುರಂ ಗ್ರಾಮದ ಬಳಿಯ ಗಣಿ ಮಾಲೀಕರಿಗೆ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನಲ್ಲಿರುವ ಗಣಿಗಳಿಂದ ಅದಿರನ್ನು ನೀಡಲಾಗಿದೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ, ಈ ಭಾಗದ ಗಣಿಗಾರಿಕೆ ಪ್ರದೇಶಗಳಲ್ಲಿ ನಡೆಸಲಾದ ಗಣಿಗಾರಿಕೆ ಪ್ರಮಾಣ ಮತ್ತು ಅದಿರನ್ನು ಯಾರಿಗೆ ಮಾರಾಟ ಮಾಡಲಾಗಿದೆ ಎಂಬ ವಿವರವನ್ನು ಕಲೆ ಹಾಕುವ ನಿಟ್ಟಿನಲ್ಲಿ ಈ ಎಲ್ಲ ಮಹತ್ವದ ದಾಖಲೆಗಳನ್ನು ಸಿಬಿಐ ಕೋರಿದೆ.

ನಾಲ್ಕು ದಿನಗಳಲ್ಲಿ ಈ ಎಲ್ಲ ದಾಖಲೆಗಳನ್ನು ನೀಡದೇ ಇದ್ದಲ್ಲಿ, ದಾಳಿ ನಡೆಸಿ ವಶಪಡಿಸಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದೂ ಅವರು ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.