ADVERTISEMENT

ಗತ ವೈಭವದ ದಿನಗಳು...

ಪ್ರಜಾವಾಣಿ ಪುಟಗಳಿಂದ... 9-02-1957

ಶ್ರೀಶಿವಮೂರ್ತಿಸ್ವಾಮಿ
Published 12 ಏಪ್ರಿಲ್ 2013, 19:50 IST
Last Updated 12 ಏಪ್ರಿಲ್ 2013, 19:50 IST

ಲೋಕ ಸೇವಕ ಸಂಘದ ಮುಖ್ಯ ಗುರಿಯು ನಾಡಿನಲ್ಲಿ ಪಕ್ಷಾತೀತ ರಾಜ್ಯವನ್ನು ಕಟ್ಟುವುದು. ನಿಜವಾದ ರಾಷ್ಟ್ರೀಯ ಸರಕಾರವನ್ನು ನಿರ್ಮಾಣ ಮಾಡುವಲ್ಲಿ ಪಕ್ಷದ ರಾಜಕಾರಣವನ್ನು ಎಣಿಸತಕ್ಕದ್ದಲ್ಲ. ಮಂತ್ರಿಮಂಡಲವು ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೆ ಸಾರ್ವಜನಿಕರಿಂದ ಆಯ್ಕೆ ಹೊಂದಿದ ಶಾಸನ ಸಭೆಗೆ ಜವಾಬ್ದಾರಿಯಾಗಿರತಕ್ಕದ್ದು. ಈ ಪ್ರಕಾರ ಎಲ್ಲ ಪಕ್ಷಗಳ ಅಥವಾ ಕೆಲವೇ ಪಕ್ಷಗಳ ನಿಷ್ಪಕ್ಷಪಾತವುಳ್ಳ ಪ್ರತಿನಿಧಿಗಳನ್ನು ಕೂಡಿಸಿ ಮಂತ್ರಿಮಂಡಳ ರಚಿಸುವುದೇ ಪಕ್ಷಾತೀತ ರಾಜ್ಯದ ಮುಖ್ಯಸ್ವರೂಪ. ಸ್ವಲ್ಪ ಹೆಚ್ಚು ಕಡಿಮೆ ಪ್ರಜಾಪ್ರಭುತ್ವದಲ್ಲಿ ಹೆಸರು ಪಡೆದ ಸ್ವಿಟ್‌ಝರ್‌ಲೆಂಡಿನ ಮಂತ್ರಿಮಂಡಲವನ್ನೇ ಹೋಲುತ್ತದೆ. ಈ ಪಕ್ಷಾತೀತ ಗುರಿಯನ್ನು ಸಾಧಿಸುವ ರಾಜಕೀಯ ಪಕ್ಷಗಳು ಹಿಂದೂಸ್ಥಾನದಲ್ಲಷ್ಟೇ ಏಕೆ, ಜಗತ್ತಿನಲ್ಲಿಯ ದೊಡ್ಡ ರಾಷ್ಟ್ರಗಳೂ ಸಾಧಿಸಿಲ್ಲ. ರಾಜ್ಯದಾಡಳಿಕೆಯಲ್ಲಿ ಸಕಲ ಪಕ್ಷ ಹಾಗೂ ವ್ಯಕ್ತಿಗಳ ಸಹಕಾರವೂ ದೊರೆತಷ್ಟೂ, ಸುಗಮವಾಗಿ ರಾಜ್ಯ ಪದ್ಧತಿಯನ್ನು ಬಲಗೊಳಿಸಬಹುದು. ಕಾರಣ ಪಕ್ಷ - ಪಂಗಡಗಳೆಂಬ ಭೇದವನ್ನು ಅಳಿಸುವ ಆದರ್ಶ ಗುರಿಯನ್ನು ಈ ಮೂಲಕ ಸುಲಭವಾಗಿ ಸಾಧಿಸಬಹುದು. ಇಲ್ಲವಾದರೆ ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ಪ್ರಭುತ್ವವನ್ನೇ ಸ್ಥಾಪಿಸಿ, ಬೇರೆ ಪಕ್ಷಗಳ ಅನುಯಾಯಿಗಳಿಗೆ ಪಕ್ಷಾಂಧತೆಯಿಂದ ವೈರತ್ವವನ್ನು ದೇಶದೆಲ್ಲೆಡೆಗೂ ಹಬ್ಬಬಹುದಾದ ವಾತಾವರಣವನ್ನು ನಾವೆಲ್ಲರೂ ಇಂದು ಅನುಭವಿಸುತ್ತಿದ್ದೇವೆ. ಶಾಸನ ಸಭೆಗಳಲ್ಲಿಯೂ ಪಕ್ಷಗಳನ್ನು ಆಳಿಸಬೇಕೆನ್ನುವ ಉದ್ದೇಶ ನಮ್ಮದಲ್ಲ. ಆದರೆ ಶಾಸನಸಭೆಯ ನಾಯಕನು ಮಂತ್ರಿಯಾಗತಕ್ಕದ್ದಲ್ಲ; ಮಂತ್ರಿಯಾದವನಿಗೆ ಶಾಸನ ಸಭೆಯ ಸೂತ್ರವನ್ನು ಮನಬಂದಂತೆ ಆಡಿಸುವ ಅಧಿಕಾರವು ಇರತಕ್ಕದ್ದಲ್ಲ.

ಅಂತೂ ಈಗಿರುವ ಮಂತ್ರಿಗಳ ಪ್ರಭುತ್ವವನ್ನು ಮುಕ್ತಿಗೊಳಿಸಿ ಶಾಸನ ಸಭೆಯ ಸಾಮೂಹಿಕ ಪ್ರಭುತ್ವವನ್ನು ಕ್ರಿಯಾತ್ಮಕವಾಗಿ ಹೆಚ್ಚಿಸುವುದೇ ನಮ್ಮ ಪಕ್ಷದ ಗುರಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.