ಬೆಂಗಳೂರು: `ಪ್ರತಿಭಟನೆ ನಡೆಸುವ ರೀತಿಯೇ ಇದು, ನೀವೂ ವಕೀಲರಾ? ನಿಮಗೇನಾದರೂ ವಿವೇಚನೆ ಇದೆಯಾ, ಹೈಕೋರ್ಟ್‌ಗೆ ನುಗ್ಗಿ ಕಲಾಪ ನಿಲ್ಲಿಸುವಂತೆ ಗಲಾಟೆ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸಬೇಕಾಗುತ್ತದೆ...~
-ಹೈಕೋರ್ಟ್ ಕಲಾಪ ಬಹಿಷ್ಕಾರಕ್ಕಾಗಿ ನ್ಯಾಯಾಲಯಕ್ಕೆ `ನುಗ್ಗಿದ~ ಕೆಲ ವಕೀಲರ ಗುಂಪಿನ ವಿರುದ್ಧ `ಗರಂ~ ಆದ ನ್ಯಾಯಮೂರ್ತಿ ದಿಲೀಪ್ ಬಿ. ಬೋಸ್ಲೆ ಅವರು ಆ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
ಸಿವಿಲ್ ಕೋರ್ಟ್‌ನಲ್ಲಿ ಗಲಾಟೆ ನಡೆಯುತ್ತಿದ್ದಂತೆ ಮಧ್ಯಾಹ್ನ 2.30ರ ವೇಳೆ 30-40 ಮಂದಿ ವಕೀಲರು ಹೈಕೋರ್ಟ್‌ಗೆ ಧಾವಿಸಿ ಕಲಾಪ ಬಹಿಷ್ಕಾರಕ್ಕೆ ಮುಂದಾದರು. ಮೊದಲು ಅವರು ನ್ಯಾ.ದಿಲೀಪ್ ಅವರ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುತ್ತಿದ್ದ ಸಭಾಂಗಣದ ಒಳಕ್ಕೆ ಹೋಗಿ ಗಲಾಟೆ ಮಾಡಿದರು. ಗಲಾಟೆ ಕಂಡು ನ್ಯಾ.ದಿಲೀಪ್ ಅವರ ಕೋಪ ಉಕ್ಕಿತು.
ಆ ಗುಂಪಿನಲ್ಲಿ ಕೆಲವರು ವಕೀಲರ ಸಮವಸ್ತ್ರ ಧರಿಸಿ ಬಂದಿರಲಿಲ್ಲ. ಅದಕ್ಕೆ ನ್ಯಾ. ದಿಲೀಪ್ ಅವರು, `ಕೋರ್ಟ್ ಪ್ರವೇಶ ಮಾಡುವಾಗ ಸಮವಸ್ತ್ರ ಧರಿಸಿ ಬರಬೇಕು ಎನ್ನುವ ಪ್ರಜ್ಞೆ ಇಲ್ಲವೆ, ಪ್ರತಿಭಟನೆ ಮಾಡುವ ರೀತಿಯೇ ಇದು, ನಾನು ಕೂಡ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆಗ ಕೂಡ ಪ್ರತಿಭಟನೆ ನಡೆದಿರುವ ಉದಾಹರಣೆಗಳು ಇವೆ. ಆದರೆ ಈ ಪರಿ ವಕೀಲರು ಎಂದೂ ಪ್ರತಿಭಟನೆ ನಡೆಸಿರಲಿಲ್ಲ. ಗಲಾಟೆ ಮಾಡುವ ಬದಲು ಕಲಾಪ ನಡೆಸದಂತೆ ಮನವಿ ಮಾಡಿಕೊಳ್ಳಬಹುದಲ್ಲ~ ಎಂದರು.
ಅಲ್ಲಿ ಹಾಜರು ಇದ್ದ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರನ್ನು ಉದ್ದೇಶಿಸಿದ ನ್ಯಾಯಮೂರ್ತಿಗಳು, `ಇಲ್ಲಿ ಯಾರ‌್ಯಾರು ವಕೀಲರು ಇದ್ದಾರೆ ಎಂದು ಹೆಸರು ಹೇಳಿ. ಎಲ್ಲರನ್ನೂ ಜೈಲಿಗೆ ಕಳುಹಿಸುವೆ~ ಎಂದರು. ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿಕೊಳ್ಳುವಂತೆ ಉದ್ರಿಕ್ತ ವಕೀಲರಿಗೆ ಸಲಹೆ ಮಾಡುವ ಮೂಲಕ ನಾಗಾನಂದ ಅವರು ಪರಿಸ್ಥಿತಿ ಶಾಂತಗೊಳಿಸಿದರು.
ನಂತರ ಉಳಿದ ಸಭಾಂಗಣಗಳಿಗೆ ಶಾಂತಚಿತ್ತರಾಗಿ ಹೋದ ವಕೀಲರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಕಲಾಪ ಮುಕ್ತಾಯಗೊಳಿಸುವಂತೆ ಕೋರಿದರು.
`ಇಬ್ಬರು ವಕೀಲರು ಈ ಘಟನೆಯಲ್ಲಿ ಸತ್ತುಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಬೇಕಿರುವ ಹಿನ್ನೆಲೆಯಲ್ಲಿ ಕಲಾಪ ಮುಕ್ತಾಯಗೊಳಿಸಬೇಕು~ ಎಂದು ವಕೀಲರು ಕೋರಿದರು. ಆದರೆ ವಾಸ್ತವದಲ್ಲಿ ಯಾವೊಬ್ಬ ವಕೀಲರ ಸಾವು ಸಂಭವಿಸಿರಲಿಲ್ಲ!
ಸಿಜೆ ಕೊಠಡಿ ಎದುರೇ ಕಚ್ಚಾಟ: ಈ ಮಧ್ಯೆ ಗೃಹ ಸಚಿವ ಆರ್.ಅಶೋಕ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರನ್ನು ಭೇಟಿಯಾಗಲು ಬಂದಿದ್ದರು.
ಆಗ ಅಲ್ಲಿಗೆ ಧಾವಿಸಿದ ವಕೀಲರ ಗುಂಪೊಂದು, ಅದು ಮುಖ್ಯ ನ್ಯಾಯಮೂರ್ತಿಗಳ ಕೊಠಡಿ ಎನ್ನುವುದನ್ನೂ ಮರೆತು ಅಶೋಕ ಅವರ ಜೊತೆ ಗಲಾಟೆಗೆ ಇಳಿಯಿತು. ಇವರ ಗಲಾಟೆ ನೋಡಿ ಪೊಲೀಸರ ದಂಡು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿತು.
ಕೋರ್ಟ್ ಚಾಲಕನ ದರೋಡೆ!
ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಅವರು ಘಟನಾ ಸ್ಥಳಕ್ಕೆ (ಸಿವಿಲ್ ಕೋರ್ಟ್) ಭೇಟಿ ನೀಡಲು ಹೋಗಿದ್ದಾಗ, ಅವರ ಕಾರು ಚಾಲಕನ ಮೇಲೆ ವಕೀಲರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
`ಚಾಲಕ ಜಗದೀಶ್ ಅವರು ಕಾರು ಪಾರ್ಕಿಂಗ್ ಮಾಡಲು ಹೋದ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿದವರು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಜಗದೀಶ್ ಅವರ ಬಳಿ ಇದ್ದ ಮೊಬೈಲ್ ಫೋನ್, ವಾಚ್ ಹಾಗೂ ಚಿನ್ನದ ಸರವನ್ನು ಕಿತ್ತುಕೊಳ್ಳಲಾಗಿದೆ~ ಎಂದು ಮೂಲಗಳು ತಿಳಿಸಿವೆ.
ಇಂದು ಕಲಾಪ ಇಲ್ಲ
ಬೆಂಗಳೂರು: ಸಿವಿಲ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಬೆಂಗಳೂ ರಿನ ಯಾವುದೇ ನ್ಯಾಯಾಲಯಗಳಲ್ಲಿ ಶನಿವಾರ ನ್ಯಾಯಾಂಗ ಕಲಾಪ ನಡೆಯುವುದಿಲ್ಲ.
ಮ್ಯಾಜಿಸ್ಟ್ರೇಟ್ ಕೋರ್ಟ್, ಸಿವಿಲ್ ಕೋರ್ಟ್, ಕೌಟುಂಬಿಕ ಕೋರ್ಟ್, ಲೋಕಾಯುಕ್ತ ಕೋರ್ಟ್, ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕೋರ್ಟ್ ಸೇರಿಯಾವುದೇ ನ್ಯಾಯಾಲಯಗಳಲ್ಲಿಯೂ ಕಲಾಪ ನಡೆಯುವುದಿಲ್ಲ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.