ADVERTISEMENT

ಗುಂಡು ಹಾರಿಸಿ ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 3:55 IST
Last Updated 1 ಜೂನ್ 2018, 3:55 IST
ಗುಂಡು ಹಾರಿಸಿ ದರೋಡೆಕೋರರ ಬಂಧನ
ಗುಂಡು ಹಾರಿಸಿ ದರೋಡೆಕೋರರ ಬಂಧನ   

ಮಂಗಳೂರು: ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇರಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದಾಗ ಪೊಲೀಸರು ಬೆನ್ನಟ್ಟಿದಾಗ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಮೂವರನ್ನು ಬಂಟ್ವಾಳ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಬಂಟ್ವಾಳ ತಾಲ್ಲೂಕು ಕುಪ್ಪೆಪದವು ನಿವಾಸಿಗಳಾದ ಮೊಹಮ್ಮದ್ ಮುಕ್ಸಿಂ,  ಮೊಹಮ್ಮದ್ ಇರ್ಷಾದ್ ಮತ್ತು ಮಾರಿಪಳ್ಳ ನಿವಾಸಿ ಸದ್ದಾಂ ಬಂಧಿತರು. ಆರೋಪಿಗಳಿಂದ ಸ್ವಿಫ್ಟ್ ಕಾರು, ತಲವಾರು, ಕಬ್ಬಿಣದ ಸರಳು, ಖಾರದ ಪುಡಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕಿನ ಗೇರುಕಟ್ಟೆ ಬಳಿ ಗುರುವಾರ ರಾತ್ರಿ ಆರೋಪಿಗಳು ಮಾರಕಾಸ್ತ್ರ ಹಿಡಿದು ಕಾರಿನಲ್ಲಿ ಓಡಾಡುತ್ತಿದ್ದರು. ಸ್ಥಳೀಯರು ಕೂಗಿದಾಗ ಅಲ್ಲಿಂದ ಪರಾರಿಯಾಗಿದ್ದರು. ಸ್ಥಳೀಯರೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಗುರುವಾಯನಕೆರೆ, ಮಣಿಹಳ್ಳ, ಪೂಂಜಾಲಕಟ್ಟೆ ಮತ್ತು ಮಧ್ವ ಚೆಕ್ ಪಾಯಿಂಟ್ ಗಳಲ್ಲಿ ಆರೋಪಿಗಳ ವಾಹನ ತಡೆಯಲು ಪೊಲೀಸರು ಯತ್ನಿಸಿದ್ದರು. ಆದರೆ, ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು.

ADVERTISEMENT

ಮಣಿಹಳ್ಳ ಜಂಕ್ಷನ್ ಬಳಿ ರಸ್ತೆಗೆ ಪೊಲೀಸ್ ವಾಹನವನ್ನು ಅಡ್ಡವಾಗಿಟ್ಟು ಆರೋಪಿಗಳನ್ನು ಬಂಧಿಸಲು ಯತ್ನಿಸಲಾಯಿತು. ಆಗ ಅದಕ್ಕೆ ಕಾರನ್ನು ಡಿಕ್ಕಿ ಹೊಡೆಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಬಂಟ್ವಾಳ ನಗರ ಠಾಣೆ ಸಬ್ ಇನ್ ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣೆ ಸಬ್ ಇನ್ ಸ್ಪೆಕ್ಟರ್ ಪ್ರಸನ್ನ ವಾಹನದ ಮೇಲೆ‌ ಗುಂಡು ಎಂದು ಎಸ್ ಪಿ ತಿಳಿಸಿದ್ದಾರೆ.
ಪೊಲೀಸರು ಗುಂಡು ಹಾರಿಸಿದಾಗ ಆರೋಪಿಗಳ ಕಾರು ಚರಂಡಿಗೆ ಇಳಿಯಿತು. ಆಗ ಇಬ್ಬರು ತಪ್ಪಿಸಿಕೊಂಡು ಪರಾರಿಯಾದರು. ಮೂವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.


ಆರೋಪಿಗಳ ಪೈಕಿ ಮೊಹಮ್ಮದ್ ಮುಕ್ಸಿಂ ವಿರುದ್ಧ 14 ಮತ್ತು ಸದ್ದಾಂ ವಿರುದ್ಧ ಎರಡು ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.