ADVERTISEMENT

ಗುಂಡು ಹಾರಿಸಿ ಮೂವರ ಬಂಧನ

ದರೋಡೆಕೋರರು ಮತ್ತು ಜಾನುವಾರು ಕಳ್ಳರ ಸೆರೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಸದ್ದಾಂ, ಮಹಮ್ಮದ್‌, ಮಕ್ಸಿನ್‌
ಸದ್ದಾಂ, ಮಹಮ್ಮದ್‌, ಮಕ್ಸಿನ್‌   

ಬಂಟ್ವಾಳ: ಬಂಟ್ವಾಳ- ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ನಾವೂರು ಗ್ರಾಮದ ಮಣಿಹಳ್ಳ ಜಂಕ್ಷನ್ ಬಳಿ ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ಗುಂಡುಹಾರಿಸಿ ಮೂವರು ಗೋವು ಕಳವು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದು,  ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಹಳೆ ಆರೋಪಿಗಳು: ಬಂಧಿತ ಆರೋಪಿಗಳ ಪೈಕಿ ಸುರತ್ಕಲ್ ನಿವಾಸಿ ಮೊಹಮ್ಮದ್ ಮುಕ್ಸಿನ್ (23) ಎಂಬಾತನ ವಿರುದ್ದ ಈಗಾಗಲೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದರೋಡೆ, ಹಲ್ಲೆ, ಕಳವು ಮತ್ತಿತರ 14ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಮಂಗಳೂರು ತಾಲ್ಲೂಕಿನ ಕುಪ್ಪೆಪದವು ನಿವಾಸಿ ಮೊಹಮ್ಮದ್ ಇರ್ಷಾದ್ (29) ಮತ್ತು ಮಾರಿಪಳ್ಳ ನಿವಾಸಿ ಸದ್ದಾಂ (30) ಎಂದು ಗುರುತಿಸಲಾಗಿದೆ. ಇವರ ವಿರುದ್ಧವೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ADVERTISEMENT

ಕಾರಿನಲ್ಲಿ ಒಟ್ಟು ಐವರು ಆರೋಪಿಗಳು ಇದ್ದರು. ಪೊಲೀಸರ ಕಾರ್ಯಾಚರಣೆ ವೇಳೆ ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಮನ್ಸೂರ್ ಮತ್ತು ಅಮ್ಮಿ ಎಂಬವರು ಪರಾರಿಯಾಗಿದ್ದಾರೆ. ಇವರ ವಿರುದ್ಧ ದನ ಕಳ್ಳತನ, ಅಕ್ರಮ ಜಾನುವಾರು ಮಾಂಸ ಮಾರಾಟ ಪ್ರಕರಣ ದಾಖಲಾಗಿದೆ.

ಮಾರಕಾಯುಧ ವಶ: ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡ ಕಾರಿನಲ್ಲಿ ಎರಡು ತಲವಾರು, ಒಂದು ಕಬ್ಬಿಣದ ರಾಡ್, ಮೆಣಸಿನಪುಡಿ, ಮಂಕಿ ಕ್ಯಾಪ್, ಹಗ್ಗ ದೊರೆತಿದ್ದು, ನಿರ್ಜನ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ನಡೆಸುವುದು ಸೇರಿದಂತೆ ರಸ್ತೆ ಬದಿ ಸಿಗುವ ಅಲೆಮಾರಿ ಜಾನುವಾರುಗಳನ್ನು ಕಳ್ಳತನ ಮಾಡಲು ಹೋಗಿರುವುದನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಐಪಿಎಸ್ ಅಕ್ಷಯ್ ಎಂ.ಹಾಕೆ, ಸಿಬ್ಬಂದಿ ನಜೀರ್, ಸಂಪತ್, ಆದರ್ಶ, ಭಾಸ್ಕರ್ ಇದ್ದರು.

ಎಸ್‌ಪಿ ರವಿಕಾಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಮಾರಕಾಯುಧ ಹಿಡಿದು ಬೀದಿ ಕರು ಒಯ್ಯಲು ಯತ್ನ!
‘ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ಎಂಬಲ್ಲಿ ಈ ತಂಡವು ಮಾರಾಕಾಸ್ತ್ರ ಹಿಡಿದುಕೊಂಡು ರಸ್ತೆ ಬದಿ ನಿಂತಿದ್ದ ಕರುವೊಂದನ್ನು ಕಾರಿಗೆ ಎತ್ತಿ ಹಾಕುತ್ತಿರುವುದನ್ನು ಸ್ಥಳೀಯ ಬೈಕ್ ಸವಾರರಿಬ್ಬರು ಗಮನಿಸಿ ಬೊಬ್ಬೆ ಹೊಡೆದು ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಕರುವನ್ನು ಅಲ್ಲೇ ಬಿಟ್ಟು ಆರೋಪಿಗಳು ಕಾರಿನಲ್ಲಿ ಬಿ.ಸಿ.ರೋಡಿನ ಕಡೆಗೆ ಪರಾರಿಯಾಗುತ್ತಿದ್ದಂತೆಯೇ ಇಲ್ಲಿನ ಪೊಲೀಸರು ತಕ್ಷಣವೇ ಪುಂಜಾಲಕಟ್ಟೆ ಮತ್ತು ಬಂಟ್ವಾಳ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಪುಂಜಾಲಕಟ್ಟೆ ಠಾಣೆ ಪೊಲೀಸರು ಆರೋಪಿಗಳ ವಾಹನವನ್ನು ಚೆಕ್‌ಪೋಸ್ಟ್ ಬಳಿ ತಡೆದು ನಿಲ್ಲಿಸುವ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಈ ನಡುವೆ ಮಧ್ವ ಎಂಬಲ್ಲಿ ನಗರ ಠಾಣೆ ಪೊಲೀಸ್ ಸಿಬ್ಬಂದಿ ಆದರ್ಶ ಮತ್ತು ಹೋಮ್ ಗಾರ್ಡ್‌ ಭಾಸ್ಕರ್ ಅವರು ಕೂಡಾ ಕಾರನ್ನು ತಡೆಯಲು ವಿಫಲವಾಗುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣೆ ಪೊಲೀಸರು ಮಣಿಹಳ್ಳ ಜಂಕ್ಷನ್ ಎಂಬಲ್ಲಿ ಜೀಪ್‌ಅನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಆರೋಪಿಗಳನ್ನು ತಡೆದಿದ್ದಾರೆ.

ಇದೇ ವೇಳೆ ಆರೋಪಿಗಳು ಪಕ್ಕದ ನಾವೂರು ರಸ್ತೆಗೆ ಏಕಾಏಕಿ ಕಾರನ್ನು ಚಲಾಯಿಸುತ್ತಿದ್ದಂತೆಯೇ ಗ್ರಾಮಾಂತರ ಮತ್ತು ನಗರ ಠಾಣಾಧಿಕಾರಿಗಳಾದ ಪ್ರಸನ್ನ ಎಂ. ಮತ್ತು ಚಂದ್ರಶೇಖರ್ ಆರೋಪಿಗಳ ಕಾರಿಗೆ ಗುಂಡು ಹಾರಿಸಿದ್ದಾರೆ. ಅಷ್ಟರಲ್ಲಿ ಕಾರು ರಸ್ತೆ ಬದಿ ಚರಂಡಿಗೆ ಸಿಲುಕಿಕೊಂಡಿತ್ತು.

ಪೊಲೀಸರು ಕಾರನ್ನು ಸುತ್ತುವರಿದು ಮೂವರನ್ನು ಬಂಧಿಸಿದ್ದಾರೆ. ಈ ನಡುವೆ ಇಬ್ಬರು ಆರೋಪಿಗಳು ತಲವಾರು ಝಳಪಿಸಿ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.