ADVERTISEMENT

ಗುಂಡ್ಲುಪೇಟೆಯಲ್ಲಿ ಆಂಥ್ರಾಕ್ಸ್ ಸೋಂಕಿನ ಭೀತಿ

ಶಿವಪುರದಲ್ಲಿ ಆರೋಗ್ಯವಂತ ರಾಸುಗಳ ಸರಣಿ ಸಾವು, ರೈತರಲ್ಲಿ ಮೂಡಿದ ಆತಂಕ

ಕೆ.ಎಸ್.ಗಿರೀಶ್
Published 22 ಮೇ 2018, 19:40 IST
Last Updated 22 ಮೇ 2018, 19:40 IST
ಗುಂಡ್ಲುಪೇಟೆಯಲ್ಲಿ ಆಂಥ್ರಾಕ್ಸ್ ಸೋಂಕಿನ ಭೀತಿ
ಗುಂಡ್ಲುಪೇಟೆಯಲ್ಲಿ ಆಂಥ್ರಾಕ್ಸ್ ಸೋಂಕಿನ ಭೀತಿ   

ಚಾಮರಾಜನಗರ: ನೆರೆಯ ಕೇರಳ ರಾಜ್ಯದಲ್ಲಿ ‘ನಿಫಾ’ ವೈರಾಣು ಸೋಂಕು ಆತಂಕ ತಂದೊಡ್ಡಿರುವ ಹೊತ್ತಿನಲ್ಲಿ ಗಡಿ ತಾಲ್ಲೂಕು ಗುಂಡ್ಲುಪೇಟೆಯಲ್ಲಿ ಆಂಥ್ರಾಕ್ಸ್ ರೋಗದ ಭೀತಿ ಮೂಡಿದೆ.

ಇಲ್ಲಿನ ಶಿವಪುರದಲ್ಲಿ ಕಳೆದ 15 ದಿನಗಳಲ್ಲಿ ರಾಸುಗಳ ಸರಣಿ ಸಾವುಗಳು ಸಂಭವಿಸಿವೆ. ಆರೋಗ್ಯವಂತ ರಾಸುಗಳು ಮೂಗು, ಬಾಯಿ ಹಾಗೂ ಗುದದ್ವಾರದಲ್ಲಿ ಕಪ್ಪುಮಿಶ್ರಿತ ರಕ್ತಸ್ರಾವದಿಂದ 8 ಜಾನುವಾರು ಮೃತಪಟ್ಟಿವೆ. ಇದು ಆಂಥ್ರಾಕ್ಸ್ ರೋಗದ ಲಕ್ಷಣಗಳನ್ನು ಹೋಲುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.

ರಾಸುಗಳ ಸರಣಿ ಸಾವಿನಿಂದ ಎಚ್ಚೆತ್ತ ಪಶುಸಂಗೋಪನೆ ಇಲಾಖೆಯು ಮೃತಪಟ್ಟ ಹಸುಗಳ ಶರೀರದ ಅಂಗಾಂಗಗಳನ್ನು ಬೆಂಗಳೂರಿನ ಪ್ರಾಣಿ ಜೈವಿಕ ವಿಜ್ಞಾನ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಿದೆ. ಒಂದು ಹಸುವಿನ ಅಂಗಾಂಗದ ಪರೀಕ್ಷೆ ಮಾತ್ರ ಬಂದಿದ್ದು, ಇದರಲ್ಲಿ ಆಂಥ್ರಾಕ್ಸ್ ಬ್ಯಾಕ್ಟೀರಿಯಗಳು ಇಲ್ಲ ಎಂದು ಸಂಸ್ಥೆ ಹೇಳಿದೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಪಶುವೈದ್ಯಾಧಿಕಾರಿಗಳು ಶಿವಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರಾಸುಗಳಿಗೆ ರೋಗನಿರೋಧಕ ಲಸಿಕೆ ಹಾಕಿದ್ದಾರೆ. ಲಸಿಕೆ ಹಾಕಿದ ನಂತರ ಇದುವರೆಗೆ ಯಾವುದೇ ಹಸುಗಳು ಸಾವನ್ನಪ್ಪಿಲ್ಲ.

‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 2008ರಿಂದಲೂ ಆಂಥ್ರಾಕ್ಸ್‌ ರೋಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಲಸಿಕೆ ಹಾಕುವ ಮೂಲಕ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಪ್ರಯೋಗಾಲಯದಿಂದ ಇನ್ನೂ ಪೂರ್ಣ ವರದಿ ಬರಬೇಕಿದ್ದು, ನಂತರವಷ್ಟೇ ಇದು ಆಂಥ್ರಾಕ್ಸ್ ಎಂದು ಹೇಳಲು ಸಾಧ್ಯ. ಮನುಷ್ಯರಿಗೆ ಇದು ಮಾರಾಣಾಂತಿಕ ಅಲ್ಲ’ ಎಂದು ತಾಲ್ಲೂಕಿನ ಪಶುವೈದ್ಯಾಧಿಕಾರಿ ಮಾದೇಶ್ ‘ಪ್ರಜಾವಾಣಿ’‌ಗೆ ತಿಳಿಸಿದರು.

2013ರಲ್ಲೂ ತಾಲ್ಲೂಕಿನ ಭೀಮನಬೀಡು ಗ್ರಾಮದಲ್ಲಿ ಆಂಥ್ರಾಕ್ಸ್ ರೋಗ ಕಾಣಿಸಿಕೊಂಡು ಹಲವು ರಾಸುಗಳ ಸಾವಿಗೆ ಕಾರಣವಾಗಿತ್ತು.

ಏನಿದು ಅಂಥ್ರಾಕ್ಸ್?: ‘ಬ್ಯಾಸಿಲಸ್‌ ಆಂಥ್ರಾಸಿಸ್‌’ ಎಂಬ ಬ್ಯಾಕ್ಟೀರಿಯಾ ಮೂಲಕ ಹರಡುವ ಆಂಥ್ರಾಕ್ಸ್ ರೋಗವು ದನ, ಕುರಿ, ಕುದುರೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಯಾವುದೇ ರೋಗ ಲಕ್ಷಣಗಳು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆರೋಗ್ಯವಾಗಿರುವ ಪ್ರಾಣಿಗಳು ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪುತ್ತವೆ. ಆಗ ಮೂಗು, ಬಾಯಿ, ಗುದದ್ವಾರದಲ್ಲಿ ಕಪ್ಪುಮಿಶ್ರಿತ ರಕ್ತ ಹೊರಬರುತ್ತದೆ.

ಆಂಥ್ರಾಕ್ಸ್‌ನಿಂದ ಮೃತಪಟ್ಟ ಪ್ರಾಣಿಗಳ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿಂದರೂ ಮನುಷ್ಯರಿಗೂ ಇದು ಹರಡುತ್ತದೆ. ಜತೆಗೆ, ಸತ್ತ ಪ್ರಾಣಿ
ಗಳ ಚರ್ಮವನ್ನು ಸುಲಿಯುವಾಗ ತಗುಲಿದರೂ ಬರುತ್ತದೆ. ಜತೆಗೆ ಮೈಮೇಲೆ ಗುಳ್ಳೆಗಳಾಗಿ ತುರಿಕೆ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿಯಂತ್ರಣ ಹೇಗೆ?: ‘ಆರೋಗ್ಯವಾಗಿರುವ ರಾಸುಗಳು ಇದ್ದಕ್ಕಿದ್ದಂತೆ ಮೃತಪಟ್ಟರೆ ಕೂಡಲೇ ಪಶುವೈದ್ಯರ ಗಮನಕ್ಕೆ ತರಬೇಕು. ಮೃತಪಟ್ಟ ಪ್ರಾಣಿಗಳ ದೇಹವನ್ನು ಕತ್ತರಿಸಬಾರದು. ಹೆಚ್ಚು ಆಳವಾದ ಗುಂಡಿ ತೆಗೆದು ಸುಣ್ಣ ಸುರಿದು ಹೂಳಬೇಕು. ಆಗ ಮಾತ್ರ ಆಂಥ್ರಾಕ್ಸ್ ರೋಗವು ಮತ್ತೊಂದು ಪ್ರಾಣಿ ಅಥವಾ ಮನುಷ್ಯರಿಗೆ ಹರಡದಂತೆ ತಪ್ಪಿಸಬಹುದು’ ಎಂದು ಪಶುವೈದ್ಯರು ಹೇಳುತ್ತಾರೆ.

‘ನಿಫಾ’ ಭೀತಿ ಇಲ್ಲ

ನೆರೆಯ ಕೇರಳ ರಾಜ್ಯದಲ್ಲಿ ಆತಂಕ ಮೂಡಿಸಿರುವ ‘ನಿಫಾ’ ವೈರಾಣು ಸೋಂಕು ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ಪಶುವೈದ್ಯಾಧಿಕಾರಿ ಡಾ.ಮಾದೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೇರಳದಿಂದ ಮಾಂಸ, ತರಕಾರಿ ಸೇರಿದಂತೆ ಯಾವುದೇ ಬಗೆಯ ಆಹಾರ ಪದಾರ್ಥಗಳನ್ನು ಇಲ್ಲಿಗೆ ಸಾಗಾಟ ಮಾಡುವುದಿಲ್ಲ. ಇಲ್ಲಿಂದಲೇ ಎಲ್ಲವೂ ಸಾಗಾಟವಾಗುತ್ತವೆ. ಜತೆಗೆ, ಬಾವಲಿಗಳ ವಲಸೆಯೂ ಕೇರಳದಿಂದ ಇಲ್ಲ. ಹೀಗಾಗಿ, ಪ್ರಾಣಿಗಳ ಮೂಲಕ ‘ನಿಫಾ’ ವೈರಸ್ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದರು.

ವನ್ಯಜೀವಿಗಳಿಗೂ ಹರಡುವ ಸಾಧ್ಯತೆ

ಶಿವಪುರ ಕಾಡಂಚಿನ ಗ್ರಾಮವಾಗಿರುವುದರಿಂದ ಸಾಮಾನ್ಯವಾಗಿ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋಗುತ್ತವೆ. ಅಲ್ಲಿ ಒಂದು ವೇಳೆ ಇವು ಮೃತಪಟ್ಟರೆ ಇತರೆ ಪ್ರಾಣಿಗಳು ಸತ್ತ ಪ್ರಾಣಿಗಳನ್ನು ತಿಂದು ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ. ಕಾಯಿಲೆಯಿಂದ ಮೃತಪಟ್ಟ ರಾಸುಗಳನ್ನು ವೈಜ್ಞಾನಿಕವಾಗಿ ಅಂತ್ಯಸಂಸ್ಕಾರ ನಡೆಸದೇ ಕಾಡಂಚಿನಲ್ಲಿ ಬಿಸಾಡುವುದರಿಂದಲೂ ಕಾಯಿಲೆ ಹರಡುವ ಭೀತಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.