ADVERTISEMENT

ಗುತ್ತಿಗೆ ಪದ್ಧತಿ ರದ್ದತಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:10 IST
Last Updated 18 ಫೆಬ್ರುವರಿ 2011, 19:10 IST

ಬೆಂಗಳೂರು: ‘ಪೌರಕಾರ್ಮಿಕರನ್ನು ಗುತ್ತಿಗೆ ಪದ್ಧತಿ ಮೂಲಕ ನೇಮಕ ಮಾಡಿಕೊಳ್ಳುವುದನ್ನು ತಡೆಗಟ್ಟಲು ಸರ್ಕಾರ ಟಾಸ್ಕ್‌ಫೋರ್ಸ್ ರಚನೆ ಮಾಡಿದ್ದು.ಆ ಮೂಲಕ ಹಂತ ಹಂತವಾಗಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಲಾಗುವುದು’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.

ನಗರದಲ್ಲಿ ಶುಕ್ರವಾರ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಸಂಘಗಳ ಸಮಿತಿ’ ಏರ್ಪಡಿಸಿದ್ದ ಪೌರಕಾರ್ಮಿಕರ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಟಾಸ್ಕಫೋರ್ಸ್ ವರದಿ ನೀಡಿದ ನಂತರ ಆ ವರದಿಯನ್ನು ಸಂಸತ್‌ನಲ್ಲಿ ಮಂಡಿಸಲಾಗುವುದು.ಇದಕ್ಕೆ ಎಲ್ಲ ಪಕ್ಷಗಳು ಬೆಂಬಲಿಸಬೇಕು’ ಎಂದು ಪ್ರತಿಪಕ್ಷಗಳಿವೆ ಅವರು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಕಂಡ ಕಂಡವರಿಗೆ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾನಗರ ಪಾಲಿಕೆಗೆ 4000 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅಗತ್ಯವಿರುವ 20 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿಲ್ಲ.ಕೂಡಲೇ ನೇಮಕಾತಿಗೆ ಪ್ರಕ್ರಿಯೆಗೆ ಚಾಲನೆ ನೀಡಬೇಕು’ ಎಂದು ಒತ್ತಾಯಿಸಿದರು.

ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಸಮ್ಮೇಳನಕ್ಕೆ ಬಾರದಿರುವ ಮೇಯರ್ ಎಸ್.ಕೆ.ನಟರಾಜ್ ಅವರ ಕ್ರಮವನ್ನು ಖಂಡಿಸಿದ ಅವರು, ‘ಕಳೆದ ಎರಡು ವರ್ಷಗಳಿಂದಲೂ ಪೌರಕಾರ್ಮಿಕರು ಸಮ್ಮೇಳನ ನಡೆಸಲು ಆಗಿಲ್ಲ.ಈಗ ಸಮ್ಮೇಳನ ಮಾಡುತ್ತಿದ್ದರೂ ಆ ಕಾರ್ಯಕ್ರಮಕ್ಕೆ ಗೈರು ಹಾಜರಾದ ಮೇಯರ್ ಕ್ರಮ ಸಮರ್ಥನೀಯವಲ್ಲ.ಇದರಿಂದ ಅವರು ಕಾರ್ಮಿಕರ ಬಗ್ಗೆ ಹೊಂದಿರುವ ಧೋರಣೆ ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಡಿದರು.

‘ಅಕ್ರಮ ಭೂಮಿಯಲ್ಲಿ ವಿವಿಧ ಟೌನ್‌ಷಿಪ್‌ಗಳನ್ನು ನಿರ್ಮಾಣ ಮಾಡುವ ಸರ್ಕಾರ ಪೌರಕಾರ್ಮಿಕರಿಗೆ ಪ್ರತ್ಯೇಕ ಟೌನ್‌ಷಿಪ್ ನಿರ್ಮಾಣ ಮಾಡಿಲ್ಲ.ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಟೌನ್‌ಷಿಪ್ ನಿರ್ಮಾಣ ಮಾಡಲಿದೆ’ ಎಂದು ಭರವಸೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕರಾದ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಸಂಘದ ಅಧ್ಯಕ್ಷ ಸಿ.ವಿ.ಶ್ರೀನಿವಾಸಯ್ಯ, ಪ್ರಧಾನ ಕಾರ್ಯದರ್ಶಿ ಎನ್.ನಾರಾಯಣ ಉಪಸ್ಥಿತರಿದ್ದರು.ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ಅವರಿಗೆ ‘ಭಾರತಜ್ಯೋತಿ ಪ್ರಶಸ್ತಿ’ ಸಂದ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.ಇದಕ್ಕೂ ಮುನ್ನ ಜನಪದ ಗಾಯಕ ಬಾನಂದೂರು ಕೆಂಪಯ್ಯ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.