ADVERTISEMENT

ಗೈರು: ಸಚಿವ ರೆಡ್ಡಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 16:35 IST
Last Updated 25 ಫೆಬ್ರುವರಿ 2011, 16:35 IST

ಬೆಂಗಳೂರು:  ವಿವಿಧ ನ್ಯಾಯಾಲಯಗಳಿಂದ ಒಂಬತ್ತು ಬಾರಿ ಹೊರಡಿಸಿದ ವಾರೆಂಟ್ ಅನ್ನು ಸ್ವೀಕರಿಸದೇ ಕೋರ್ಟ್‌ಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದ ಸಚಿವ ಜಿ.ಜನಾರ್ದನ ರೆಡ್ಡಿ ಈಗ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇವರಿಗೆ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ. ಇದೇ ಪ್ರಕರಣದಲ್ಲಿ ಓಎಂಸಿ ಮೈನಿಂಗ್ ಕಂಪೆನಿಯ ನಿರ್ದೇಶಕ ಕೆ.ರಾಮಚಂದ್ರ ಅವರನ್ನೂ ಪ್ರತಿವಾದಿಯಾಗಿಸಿದ ಹಿನ್ನೆಲೆಯಲ್ಲಿ ಅವರಿಗೂ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ.

2006ರಿಂದಲೂ ವಾರೆಂಟ್ ಸ್ವೀಕರಿಸದ ರೆಡ್ಡಿ ಅವರನ್ನು ವಿವಿಧ ಕಾಯ್ದೆಗಳ ಅಡಿ ಬಂಧಿಸಲು ಆದೇಶಿಸುವಂತೆ ಕೋರಿ ವಕೀಲ ಜಿ.ಆರ್.ಮೋಹನ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.  ಈ ಪ್ರಕರಣ ಶುಕ್ರವಾರ ವಿಚಾರಣೆಗೆ ಬಂದಾಗ, ಸರ್ಕಾರದ ಪರ ವಕೀಲರು, ರೆಡ್ಡಿ ಅವರು ಧಾರವಾಡದ ಸಂಚಾರಿ ಪೀಠದಿಂದ ವಾರೆಂಟ್‌ಗಳಿಗೆ ತಡೆ ಪಡೆದುಕೊಂಡಿದ್ದಾರೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೋಹನ್ ಅವರು, ‘ರೆಡ್ಡಿ ಪ್ರತ್ಯೇಕ ಅರ್ಜಿ ಸಲ್ಲಿಸಿ ತಡೆ ಪಡೆದುಕೊಂಡಿಲ್ಲ. ಬದಲಿಗೆ ಗಣಿ ಪ್ರಕರಣದಲ್ಲಿ ರಾಮಚಂದ್ರ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರ್ಟ್ ತಡೆ ನೀಡಿದೆಯಷ್ಟೇ’ ಎಂದರು.

ಇದನ್ನು ಪೀಠ ಗಂಭೀರವಾಗಿ ಪರಿಗಣಿಸಿತು. ವಾರೆಂಟ್ ಅನ್ನು ಸ್ವೀಕರಿಸಿಲ್ಲ ಎಂದರೆ ಏನು ಅರ್ಥ, ಅವರಿಗೆ ವಾರೆಂಟ್ ಜಾರಿಯಾಗಿರುವುದು ಮಾಧ್ಯಮಗಳಲ್ಲೂ ಬಂದಿದೆ. ಇಡೀ ರಾಜ್ಯಕ್ಕೇ ಗೊತ್ತಾಗಿದೆ. ಅವರಿಗೆ ಮಾತ್ರ ತಿಳಿಯಲಿಲ್ಲವೇ’ ಎಂದು ಪ್ರಶ್ನಿಸಿದರು. ‘ಇಂತಹ ಪ್ರವೃತ್ತಿ ಗಮನಿಸಿದರೆ ನಮಗೇ ಬೇಸರವಾಗುತ್ತದೆ. ನಿಮಗೆ (ಸರ್ಕಾರಕ್ಕೆ) ಏನೂ ಎನಿಸುವುದಿಲ್ಲವೇ’ ಎಂದು ಕೇಳಿದರು. ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಲಾಯಿತು.

 ಸದುದ್ದೇಶವೇ, ಅದು ಹೇಗೆ..?
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಸರ್ಕಾರವು ರೆಡ್ಡಿ ಅವರ ವಿರುದ್ಧ ಇದ್ದ ಗಡಿ ಗುರುತು ನಾಶ, ಅಕ್ರಮ ಗಣಿಗಾರಿಕೆ ಇತ್ಯಾದಿ ಪ್ರಕರಣಗಳನ್ನು ಸದುದ್ದೇಶದಿಂದ ಹಿಂದಕ್ಕೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಯಾವುದೇ ಮೊಕದ್ದಮೆ ಇಲ್ಲ’ ಎಂದರು.

ಆಗ ನ್ಯಾ.ಕೇಹರ್ ಅವರು, ‘ಅದು ಸದುದ್ದೇಶಕ್ಕಾಗಿಯೇ ಹಿಂದಕ್ಕೆ ಪಡೆದದ್ದು ಎಂದು ನಿಮಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು. ‘ಈ ರೀತಿ ಕೋರ್ಟ್ ಆದೇಶಗಳನ್ನು ಸಚಿವರೊಬ್ಬರು ಉಲ್ಲಂಘನೆ ಮಾಡುತ್ತಿದ್ದಾರೆ ಎಂದರೆ ಅದು ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಹದ್ದಾಗಿದೆ. ಕಾನೂನಿನ ದುರ್ಬಳಕೆ ಆಗುತ್ತಿದೆ’ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT