ADVERTISEMENT

ಗೋಮಾಂಸ ಭಕ್ಷಣೆಗೆ ಪೊಲೀಸರಿಂದ ತಡೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
ಮೈಸೂರಿನ ಪುರಭವನದ ಆವರಣದಲ್ಲಿ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ‘ಸಾಮೂಹಿಕ ಗೋಮಾಂಸ ಭಕ್ಷಣೆ’ ಕಾರ್ಯಕ್ರಮಕ್ಕೆ ತಡೆಯೊಡ್ಡಿದ ಪೊಲೀಸರ ಕ್ರಮವನ್ನು ಖಂಡಿಸಿ ಟ್ರಸ್ಟ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೈಸೂರಿನ ಪುರಭವನದ ಆವರಣದಲ್ಲಿ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ‘ಸಾಮೂಹಿಕ ಗೋಮಾಂಸ ಭಕ್ಷಣೆ’ ಕಾರ್ಯಕ್ರಮಕ್ಕೆ ತಡೆಯೊಡ್ಡಿದ ಪೊಲೀಸರ ಕ್ರಮವನ್ನು ಖಂಡಿಸಿ ಟ್ರಸ್ಟ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ಬಹಿರಂಗವಾಗಿ ಗೋಮಾಂಸ ಹಂಚಿಕೆ ಮತ್ತು ಭಕ್ಷಣೆಗೆ ಪೊಲೀಸರು ಅವಕಾಶ ನಿರಾಕರಿಸಿದ ಘಟನೆ ಇಲ್ಲಿನ ಪುರಭವನದಲ್ಲಿ ಭಾನುವಾರ ನಡೆಯಿತು. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಏನಿದು ಘಟನೆ?: ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದಲಿತ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇಲ್ಲಿನ ಪುರಭವನದ ಆವರಣದಲ್ಲಿ ‘ಸಾಮೂಹಿಕ ಗೋಮಾಂಸ ಭಕ್ಷಣೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆಗಷ್ಟೇ ಅವಕಾಶ ಮಾಡಿಕೊಟ್ಟ ಪೊಲೀಸರು ಗೋಮಾಂಸ ಹಂಚಿಕೆ ಮತ್ತು ಸೇವಿಸುವುದಕ್ಕೆ ತಡೆಯೊಡ್ಡಿದರು. ಪ್ರತಿಭಟನಾ ಸ್ಥಳಕ್ಕೆ ಗೋಮಾಂಸ ತರಲು ಯತ್ನಿಸಿದ ಇಬ್ಬರು, ಗೋಮಾಂಸ ಹಾಗೂ ಆಟೊವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತಾದರೂ ನಂತರ ತಿಳಿಯಾಯಿತು.

ಡಿಸಿಪಿ ರುದ್ರಮುನಿ, ಎಸಿಪಿ ರಾಜಶೇಖರ್ ಹಾಗೂ ಇಬ್ಬರು ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಪೊಲೀಸರು, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮತ್ತು ಅಶ್ವಾರೋಹಿ ದಳದ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಸ್ವಾತಂತ್ರ್ಯಕ್ಕೆ ಧಕ್ಕೆ; ಆಕ್ರೋಶ: ಪೊಲೀಸರ ಕ್ರಮ ಖಂಡಿಸಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು, ಗೋಮಾಂಸ ಭಕ್ಷಣೆಗೆ ತಡೆಯೊಡ್ಡುವ ಮೂಲಕ ಸರ್ಕಾರ ದಲಿತರ ತೇಜೋವಧೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಕಾರ್ಯಕ್ರಮದ ಮೂಲಕ ದಲಿತರು, ಅಲ್ಪಸಂಖ್ಯಾತರನ್ನು ಒಂದೇ ವೇದಿಕೆಯಡಿ ಸಂಘಟಿಸಿ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಕೇಂದ್ರ ಸರ್ಕಾರವನ್ನು ಕಿತ್ತೆಸೆಯುವುದು ನಮ್ಮ ಯತ್ನದ ಭಾಗವಾಗಿತ್ತು. ಇದೊಂದು ಆರಂಭ ಅಷ್ಟೇ. ಮುಂದೆ ಇಂತಹ ಪ್ರಯತ್ನಗಳನ್ನು ಇನ್ನಷ್ಟು ನಡೆಸಲಾಗುವುದು’ ಎಂದು ತಿಳಿಸಿದರು.

‘ಗೋಮಾಂಸ ಸೇವನೆ ಬಹುಜನರ ಆಹಾರ ಹಕ್ಕು. ಇದನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದೆ. ಸಂವಿಧಾನದಲ್ಲಿ ಎಲ್ಲಿಯೂ ಗೋ ಮಾಂಸವನ್ನು ತಿನ್ನಬಾರದು ಎಂದು ಹೇಳಿಲ್ಲ. ಹೀಗಿದ್ದ ಮೇಲೆ ಗೋಮಾಂಸ ಸೇವಿಸಲು ತಡೆಯೊಡ್ಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
‘ಗೋರಕ್ಷಕರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ನಂಬುವಂತಿಲ್ಲ. ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಮರುದಿನವೇ ಮೋದಿ ಕಟು ಶಬ್ದಗಳಲ್ಲಿ ಖಂಡಿಸಬೇಕಿತ್ತು. ಆದರೆ, ಅವರು ಹಾಗೆ ಮಾಡದೆ ಘಟನೆ ನಡೆದ ಬಹಳಷ್ಟು ದಿನದ ನಂತರ ಟೀಕಿಸುತ್ತಿರುವುದನ್ನು ನೋಡಿದರೆ ಅವರದು ದ್ವಂದ್ವನೀತಿ ಎಂಬುದು ಸ್‍ಪಷ್ಟವಾಗುತ್ತದೆ’ ಎಂದು ಕಿಡಿಕಾರಿದರು.

‘ಇಲ್ಲಿ ತಿನ್ನುವುದಕ್ಕೆ ತಡೆ ಹಾಕಬಹುದು. ಆದರೆ, ನಾವು ನಮ್ಮ ಮನೆಯಲ್ಲಿ ತಿನ್ನುತ್ತೇವೆ, ಹೋಟೆಲಿನಲ್ಲಿ ತಿನ್ನುತ್ತೇವೆ. ಇದಕ್ಕೆ ತಡೆಹಾಕಲಿ ನೋಡೋಣ’ ಎಂದು ಸವಾಲು ಹಾಕಿದರು.

ನಮ್ಮ ಆಹಾರ ದನ, ಅದು ನಮ್ಮ ಹಕ್ಕು: ‘ಗುಜರಾತ್‌ನಲ್ಲಿ ಸತ್ತ ದನದ ಚರ್ಮವನ್ನು ಸುಲಿದರು ಎಂಬ ಒಂದೇ ಕಾರಣಕ್ಕೆ ದಲಿತರ ಮೇಲೆ ಅಮಾನವೀಯ
ವಾಗಿ ಹಲ್ಲೆ ನಡೆಸಲಾಗಿದೆ. ನಮ್ಮ ಆಹಾರ ದನ, ಅದು ನಮ್ಮ ಹಕ್ಕು ಎಂದು ಬಹಿರಂಗವಾಗಿಯೇ ಘೋಷಿಸುತ್ತಿದ್ದೇವೆ. ಇದಕ್ಕೆ ಜೈಲು ಶಿಕ್ಷೆ ಕೊಡುತ್ತಾರಾ? ಗುಂಡಿಕ್ಕಿ ಕೊಲ್ಲುತ್ತಾರಾ’ ಎಂದು ದಲಿತ ವೆಲ್‌ಫೇರ್ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಸವಾಲೆಸೆದರು.
ಬಹಿರಂಗವಾಗಿ ಗೋಮಾಂಸ ಭಕ್ಷಣೆ ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೀದಿಲೇ ದಲಿತರಿಗೆ ಹೊಡೆದಾಗ, ಬೀದಿಲೇ ತಿನ್ನಬೇಕು’ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪೊಲೀಸರ ಕ್ರಮ ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು. ಸಂಘಟನೆಯ ಸಿದ್ದಯ್ಯ, ಮಹದೇವಮೂರ್ತಿ, ನಿಂಗರಾಜ ಮಲ್ಲಾಡಿ, ಆಲೂರು ನಾಗೇಂದ್ರ, ಶಂಬಯ್ಯ, ಎಸ್‌ಡಿಪಿಐನ ದೇವನೂರು ಪುಟ್ಟನಂಜಯ್ಯ, ಕಲೀಂ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಕೆ. .ಎಸ್.ಶಿವರಾಮು ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.