ADVERTISEMENT

ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST

ಹೊನ್ನಾವರ: ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ಬಂದ ಗುಂಪೊಂದು ಕರ್ಕಿನಾಕಾ ಸಮೀಪ ಬುಧವಾರ ತಡರಾತ್ರಿ ತಡೆದು, ಅದರಲ್ಲಿದ್ದ ಭಟ್ಕಳದ ಗುರ್ಫಾನ್ ಕೋಟೆ ಹಾಗೂ ಮುತಾಲಿನ್ ಮುಕ್ತೇಸರ್ ಎಂಬುವವರ ಮೇಲೆ ಹಲ್ಲೆ ನಡೆಸಿದೆ.

ಈ ಇಬ್ಬರಿಗೂ ಗಂಭೀರವಾದ ಗಾಯಗಳಾಗಿದ್ದು, ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಟಾದ ಸೂರಜ್ ನಾಯ್ಕ, ರಾಘು ಶೆಟ್ಟಿ, ಉದಯ ನಾಯ್ಕ, ಮಾಬ್ಲ ಗೌಡ, ಸಂತೋಷ ಶೇಟ್, ರಾಘು ಮೇಸ್ತ, ನಟರಾಜ ಶೆಟ್ಟಿ, ಸುದರ್ಶನ, ಹೊನ್ನಾವರ ತಾಲ್ಲೂಕಿನ ಕರ್ಕಿಯ ಸುಬ್ರಾಯ ಗೌಡ ಸೇರಿದಂತೆ 150 ಜನರ ವಿರುದ್ಧ ದೂರು ದಾಖಲಾಗಿದೆ. ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಹಲ್ಲೆಗೊಳಗಾದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

ADVERTISEMENT

ಮಾದನಗೇರಿಯಿಂದ ಭಟ್ಕಳದ ಕಡೆ ಒಂದು ಕೋಣ, ಒಂದು ಎಮ್ಮೆ ಹಾಗೂ ಒಂದು ಗೂಳಿಯನ್ನು ಸಾಗಿಸಲಾಗುತ್ತಿತ್ತು. ಇದರ ಮಾಹಿತಿ ಪಡೆದ ಕುಮಟಾದ ಒಂದು ಗುಂಪು ಈ ವಾಹನವನ್ನು ಕಾರು ಹಾಗೂ ಬೈಕ್‌ಗಳಲ್ಲಿ ಬೆನ್ನಟ್ಟಿ ನಿಲ್ಲಿಸಿತು. ನಂತರ ಸ್ಥಳೀಯರೂ ಈ ಗುಂಪಿನೊಂದಿಗೆ ಸೇರಿಕೊಂಡು ಗೋ ಸಾಗಣೆ ಮಾಡುತ್ತಿದ್ದವರನ್ನು ಥಳಿಸಿದರು. ಆಗ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಹಲ್ಲೆಗೆ ಸಂಬಂಧಿಸಿದಂತೆ ಸುಬ್ರಾಯ ಗೌಡ ಹಾಗೂ ಇತರ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.