ADVERTISEMENT

ಗೌರಿ ಹಂತಕರ ಬಂಧಿಸಿ: ಪೊಲೀಸ್‌ ಅಧಿಕಾರಿಗಳಿಗೆ ಪರಮೇಶ್ವರ ತಾಕೀತು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಇದ್ದರು -ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಗೃಹ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೂಚಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪರಮೇಶ್ವರ ಗೃಹ ಖಾತೆ ನಿಭಾಯಿಸುತ್ತಿದ್ದ ಸಂದರ್ಭದಲ್ಲಿ ಕಲಬುರ್ಗಿ ಹತ್ಯೆಯಾಗಿತ್ತು. ಆದರೆ, ಈವರೆಗೂ ಹಂತಕರ ಪತ್ತೆ ಸಾಧ್ಯವಾಗಿಲ್ಲ.

ಮತ್ತೊಮ್ಮೆ ಗೃಹ ಇಲಾಖೆ ವಹಿಸಿಕೊಂಡ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಶನಿವಾರ ಅವರು ಮೊದಲ ಸಭೆ ನಡೆಸಿದರು.

ADVERTISEMENT

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪರಮೇಶ್ವರ, ‘ಈ ಇಬ್ಬರ ಹತ್ಯೆ ತನಿಖೆ ಕುರಿತ ಕೆಲವು ವಿವರಗಳನ್ನು ಅಧಿಕಾರಿಗಳು ನೀಡಿದ್ದಾರೆ’ ಎಂದರು.

ಪೊಲೀಸ್ ಇಲಾಖೆ ಮುಂದೆ ಹಲವು ಸವಾಲುಗಳಿವೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಟ್ರಾಫಿಕ್‌ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಬೇಕಿದೆ ಎಂದ ಅವರು, ಆಂತರಿಕ ಭದ್ರತೆ, ಪೊಲೀಸ್‌ ಬೀಟ್‌ ಹೆಚ್ಚಿಸಲು ಮತ್ತು ಬೆಂಗಳೂರು ನಗರದಲ್ಲಿ ಅಪರಾಧ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಹೊಸ ಪೊಲೀಸ್‌ ಠಾಣೆಗಳ ಮಂಜೂರಾತಿ, ಇತರ ಮೂಲಸೌಕರ್ಯಗಳಿಗೆ ಅಗತ್ಯ ಅನುದಾನ, ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನೇಮಕಾತಿ ಮತ್ತು ತರಬೇತಿ ಕುರಿತೂ ಪೊಲೀಸ್‌ ಅಧಿಕಾರಿಗಳ ಜತೆ ಪರಮೇಶ್ವರ ಚರ್ಚೆ ನಡೆಸಿದರು.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಕುರಿತು ಚರ್ಚಿಸಲು ಶೀಘ್ರದಲ್ಲೆ ಗೃಹ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಜೂನ್‌ 17ರ ನಂತರ ಗೃಹ ಇಲಾಖೆ ವಲಯವಾರು ಸಭೆ ಆಯೋಜಿಸುವ ಉದ್ದೇಶವಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.