ADVERTISEMENT

ಗೌರಿ ಹತ್ಯೆ ಪ್ರಕರಣ: ‘ಗನ್‌ ಕೇಳಿದ್ದ ಪ್ರವೀಣ್; ನವೀನ್ ಕೊಟ್ಟಿರಲಿಲ್ಲ’

ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಗೌರಿ ಹತ್ಯೆ ಪ್ರಕರಣ: ‘ಗನ್‌ ಕೇಳಿದ್ದ ಪ್ರವೀಣ್; ನವೀನ್ ಕೊಟ್ಟಿರಲಿಲ್ಲ’
ಗೌರಿ ಹತ್ಯೆ ಪ್ರಕರಣ: ‘ಗನ್‌ ಕೇಳಿದ್ದ ಪ್ರವೀಣ್; ನವೀನ್ ಕೊಟ್ಟಿರಲಿಲ್ಲ’   

ಬೆಂಗಳೂರು: ‘ಬೀರೂರಿನಲ್ಲಿ ಭೇಟಿಯಾಗಿದ್ದ ಪ್ರವೀಣ್, ಸುಮ್ಮನೇ ಮಾತನಾಡುತ್ತಿರುವಾಗ ಗನ್‌ ಬೇಕೆಂದು ಕೇಳಿದ್ದ. ಆದರೆ, ನಾನು ಆತನಿಗೆ ಇದುವರೆಗೂ ಗನ್ ಕೊಟ್ಟಿಲ್ಲ’.

ಇದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್‌ಕುಮಾರ್‌, ಗುಜರಾತ್‌ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಗೆ ನೀಡಿದ ಹೇಳಿಕೆ. ಆರೋಪಿಯ ವಿಚಾರಣೆ ನಡೆಸಿದ್ದ ಪ್ರಯೋಗಾಲಯದ ಅಧಿಕಾರಿಗಳು, ಹಲವು ಪ್ರಶ್ನೆಗಳಿಗೆ ಆತನಿಂದ ಉತ್ತರ ಪಡೆದುಕೊಂಡಿದ್ದಾರೆ. ಆ ಬಗ್ಗೆ ವೈಜ್ಞಾನಿಕ ಅಧಿಕಾರಿ ಎಸ್‌.ಆರ್‌.ಶಾ, ಎಸ್‌ಐಟಿ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರಿಗೆ ಇತ್ತೀಚೆಗಷ್ಟೇ ಎರಡು ಪುಟಗಳ ಪತ್ರ ಬರೆದಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ.

‘ಹತ್ಯೆ ಆರೋಪಿ ಕೆ.ಟಿ.ನವೀನ್‌ಕುಮಾರ್‌, ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದ. ಹೀಗಾಗಿ, ಆ ಪರೀಕ್ಷೆ ನಡೆಸಲು ಆಗಿಲ್ಲ. ಸಂದರ್ಶನವನ್ನಷ್ಟೇ ನಡೆಸಿದೆವು. ಅದರಲ್ಲಿ ಆತ, ಕನ್ನಡದಲ್ಲಿ ಉತ್ತರಗಳನ್ನು ನೀಡಿದ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿ ಈ ಪತ್ರ ಬರೆಯುತ್ತಿದ್ದೇವೆ’ ಎಂದು ಶಾ ಹೇಳಿದ್ದಾರೆ.

ADVERTISEMENT

‘ಗೌರಿ, ಪತ್ರಕರ್ತೆ ಎಂದು ಆರೋಪಿಗೆ ಗೊತ್ತಿದೆ. ಕುತೂಹಲಕ್ಕಾಗಿ ಅವರ ಬರಹಗಳನ್ನು ಆತ ಓದಿದ್ದಾನೆ. ಅವರ ಹತ್ಯೆ ಬಳಿಕವೇ ಈ ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಾರಂಭಿಸಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದ ವೇಳೆ ಗೌರಿ ಮನೆಗೂ ಕರೆದೊಯ್ಯಲಾಗಿತ್ತು. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರಿಂದ ಮನೆಯ ಬಗ್ಗೆ ಆರೋಪಿ ಏನನ್ನು ಹೇಳಿರಲಿಲ್ಲ’.

‘ಪೊಲೀಸರು ತಮ್ಮಿಷ್ಟದಂತೆ ತನಿಖೆ ಮಾಡುತ್ತಿದ್ದಾರೆ. ನನಗೆ ಮಾನಸಿಕ ಕಿರುಕುಳವನ್ನೂ ನೀಡುತ್ತಿದ್ದಾರೆ ಎಂದು ಆರೋಪಿ ಪದೇ ಪದೇ ಹೇಳುತ್ತಿದ್ದ. ನಾನು ಸಾಯುವ ಮುನ್ನ ಒಮ್ಮೆ ಕರ್ನಾಟಕವನ್ನು ಪೂರ್ತಿಯಾಗಿ ನೋಡಬೇಕು’ ಎಂಬ ಆಸೆ ವ್ಯಕ್ತಪಡಿಸಿದ.

‘ಗೌರಿ ಲಂಕೇಶ್ ಹತ್ಯೆ ಬಗ್ಗೆ ಆತ ಯಾರೊಬ್ಬರ ಎದುರು ಅಭಿಪ್ರಾಯ ಹಂಚಿಕೊಂಡಿಲ್ಲ. ಖುಷಿ ಹಾಗೂ ದುಃಖ ಎರಡೂ ಆತನಿಗಿಲ್ಲ. ಆದರೆ, ಹತ್ಯೆ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಆತ ಹೆಚ್ಚು  ಯೋಚಿಸುತ್ತಿದ್ದಾನೆ’ ಎಂದು ಶಾ ಹೇಳಿದ್ದಾರೆ.

‘ಪ್ರೊ. ಕೆ.ಎಸ್. ಭಗವಾನ್ ಯಾರು ಎಂದೂ ಆತನಿಗೆ ಗೊತ್ತಿದೆ. ಅವರು ಸಾಹಿತಿ, ಮೈಸೂರಿನವರು ಎಂದಷ್ಟೇ ಹೇಳುತ್ತಾನೆ. ಆದರೆ, ಅವರ ಯಾವುದೇ ಪುಸ್ತಕವನ್ನು ಆರೋಪಿ ಓದಿಲ್ಲ. ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿಲ್ಲ. ಸಮಯ ವ್ಯರ್ಥ ಮಾಡಲು ಆತ ಇಷ್ಟಪಡುವುದಿಲ್ಲ. ಆತ ಕಡು ಹಿಂದೂತ್ವವಾದಿ ಅಲ್ಲ. ಸ್ವಲ್ಪ ಓದಿದ್ದಾನಷ್ಟೇ’ ಎಂದಿದ್ದಾರೆ.

‘ನವೀನ್‌ಗೆ ಪ್ರವೀಣ್ ಯಾರು ಎಂಬುದು ಗೊತ್ತಿದೆ. ಕಾರ್ಯಕ್ರಮವೊಂದಕ್ಕೆ ಹೋದಾಗ ಪ್ರವೀಣ್ ಬಗ್ಗೆ ಸ್ನೇಹಿತನೊಬ್ಬ ಆತನಿಗೆ ತಿಳಿಸಿದ್ದ. 2017ರಲ್ಲಿ ಮಂಡ್ಯದ ಸಂಭಾಜಿ ಸೇತುವೆ ಬಳಿ ಮೊದಲ ಬಾರಿಗೆ ಆರೋಪಿ, ಪ್ರವೀಣ್‌ನನ್ನು ಭೇಟಿ ಆಗಿದ್ದ. ಆನಂತರ, ಆತನನ್ನು ಬೀರೂರಿನ ತನ್ನ ಮನೆಗೂ ಕರೆಸಿದ್ದ’ ಎಂದು ಶಾ ಹೇಳಿದ್ದಾರೆ.

**
ಕಲಬುರ್ಗಿ ಹಂತ‌ಕರನ್ನೂ ಬಂಧಿಸಿ: ಉಮಾದೇವಿ

ಧಾರವಾಡ: ಪತ್ರಕರ್ತೆ ಗೌರಿ ಲಂಕೇಶ ಹಂತರಕನ್ನು ಬಂಧಿಸಿದಂತೆಯೇ, ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹಂತಕರನ್ನೂ ಆಸ್ಥೆ ವಹಿಸಿ ಬಂಧಿಸಬೇಕು ಎಂದು ಕಲಬುರ್ಗಿ ಅವರ ಪತ್ನಿ ಉಮಾದೇವಿ ಮಂಗಳವಾರ ಇಲ್ಲಿ ಆಗ್ರಹಿಸಿದರು.

‘ಕಲಬುರ್ಗಿ ಅವರ ಹತ್ಯೆಯ ತನಿಖೆ ಚುರುಕುಗೊಳಿಸಲು ಸೂಚಿಸುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೇವೆ. ಹತ್ಯೆ ನಡೆದ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವರಾಗಿದ್ದ ಡಾ. ಜಿ.ಪರಮೇಶ್ವರ್ ಅವರೇ ಈಗಲೂ ಗೃಹ ಸಚಿವರಾಗಿದ್ದಾರೆ. ಗೌರಿ ಹಂತಕರನ್ನು ಬಂಧಿಸಿದಂತೆ, ನನ್ನ ಪತಿಯ ಹಂತಕರನ್ನೂ ಬಂಧಿಸಲು ನೂತನ ಸರ್ಕಾರ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಸುದ್ದಿಗಾರರಿಗೆ ಹೇಳಿದರು.

**

ಆರೋಪಿಗೆ ಸಿಂಧನೂರು ನಂಟು

ಸಿಂಧನೂರು (ರಾಯಚೂರು ಜಿಲ್ಲೆ): ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿದ ಪ್ರಮುಖ ಆರೋಪಿ ಸಿಂಧನೂರಿನಲ್ಲಿ ಪಿಯುಸಿ ಮತ್ತು ಪದವಿ ಓದಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿ ಪರಶುರಾಮ ವಾಗ್ಮೋರೆ ಅವರ ತಂದೆ ಅಶೋಕ ಪಾತ್ರೆ ವ್ಯಾಪಾರಿಯಾಗಿದ್ದು, 10 ವರ್ಷಗಳ ಹಿಂದೆ ಸಿಂಧನೂರಿನಲ್ಲಿ ವಾಸವಾಗಿದ್ದರು. ಅವರ ಪುತ್ರ ಪರಶುರಾಮ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಮಾನ್ವಿಗೆ ವಲಸೆ ಹೋದ ಅಶೋಕ ವಾಗ್ಮೋರೆ ಅವರು ಎರಡು ವರ್ಷಗಳ ನಂತರ ಸಿಂದಗಿಗೆ ಹೋಗಿ ನೆಲೆಸಿದ್ದಾರೆ.

ಸಿಂದಗಿಯಲ್ಲಿ ಪರಶುರಾಮ ವಾಗ್ಮೋರೆ ಶ್ರೀರಾಮ ಸೇನೆ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. 2012 ಜನವರಿಯಲ್ಲಿ ಸಿಂದಗಿ ತಹಶೀಲ್ದಾರ್‌ ಕಚೇರಿ ಮುಂಭಾಗ ಪಾಕಿಸ್ತಾನದ ಬಾವುಟ ಹಾರಿಸಿ ಕೋಮುಗಲಭೆ ಸೃಷ್ಟಿಸುವ ಸಂಚು ಹೂಡಿದ ಪ್ರಕರಣದಲ್ಲಿ ಪರಶುರಾಮ 6ನೇಆರೋಪಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಬೇಡ: ಹೈಕೋರ್ಟ್‌

ಬೆಂಗಳೂರು: ‘ಪೊಲೀಸರು ತಮ್ಮ ವಶದಲ್ಲಿರುವ ಆರೋಪಿಗಳಿಂದ ಸತ್ಯ ಬಾಯ್ಬಿಡಿಸಲು ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡುವುದು ಬೇಡ. ಬೇಕಾದರೆ ಫಸ್ಟ್, ಸೆಕೆಂಡ್‌ ಟ್ರೀಟ್‌ಮೆಂಟ್‌ ಕೊಡಬಹುದು’...! ಹೀಗೆಂದು ಹೈಕೋರ್ಟ್‌ ಲಘು ದಾಟಿಯಲ್ಲಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ನಮಗೆ ವಕೀಲರನ್ನು ನೇಮಿಸಿಕೊಳ್ಳಲು ಮತ್ತು ವೈದ್ಯಕೀಯ ತಪಾಸಣೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್‌.ಪಿ.ಅಮೃತೇಶ್‌, ‘ಪೊಲೀಸರು ಆರೋಪಿಗೆ ವೃಥಾ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡುತ್ತಾರೆ. ಮಾಧ್ಯಮಗಳೂ ಇಂತಹ ಪ್ರಕರಣಗಳನ್ನು ಅತಿರಂಜಿತಗೊಳಿಸಿ ವರದಿ ಮಾಡುತ್ತಿವೆ’ ಎಂದು ಆರೋಪಿಸಿದರು.

ಇದಕ್ಕೆತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪರ ವಕೀಲ ಚೇತನ್‌ ದೇಸಾಯಿ, ‘ಸ್ವಾಮಿ, ಯಾವ ಡಿಗ್ರಿ ಮೆಥೆಡ್ಡೂ ಇಲ್ಲ. ಅರ್ಜಿದಾರರ ಈ ಆರೋಪಗಳೆಲ್ಲಾ ಆಧಾರರಹಿತ. ಪೊಲೀಸರು ಕಾನೂನು ಪ್ರಕಾರವೇ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಮೈಮುಟ್ಟುವ ಪ್ರಮೇಯವೇ ಇಲ್ಲ. ಅವರಿಗೆ ವೈದ್ಯಕೀಯ ಚಿಕಿತ್ಸೆ ಏನಾದರೂ ಬೇಕಾದರೆ ಖಂಡಿತಾ ಕೊಡಿಸುತ್ತೇವೆ’ ಎಂದು ಉತ್ತರಿಸಿದರು.

ಇಬ್ಬರ ಹೇಳಿಕೆಗೂ ಹಾಸ್ಯಮಿಶ್ರಿತ ಧಾಟಿಯಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಹೌದೌದು... ದೇಸಾಯಿ, ಆರೋಪಿಗೆ ಥರ್ಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡಬೇಡಿ. ಬೇಕಿದ್ದರೆ ಫಸ್ಟ್‌ ಮತ್ತು ಸೆಕೆಂಡ್‌ ಡಿಗ್ರಿ ಟ್ರೀಟ್‌ಮೆಂಟ್‌ ಕೊಡಿ’ ಎಂದು ನುಡಿದರು.

ಆದೇಶ: ‘ಅರ್ಜಿದಾರರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಪ್ರಾಸಿಕ್ಯೂಷನ್‌ ಅನುವು ಮಾಡಿಕೊಡಬೇಕು. ಈ ಸಂಬಂಧ ತನಿಖೆಯ ಪ್ರಗತಿ ಕುರಿತಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.