ADVERTISEMENT

ಗ್ರಾಮ ಲೆಕ್ಕಿಗರ ಕಾವಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ `ಮಾದರಿ ನೀತಿಸಂಹಿತೆ' ಸಮರ್ಪಕ ಅನುಷ್ಠಾನದ ಹೆಚ್ಚಿನ ಜವಾಬ್ದಾರಿಯನ್ನು ಗ್ರಾಮ ಲೆಕ್ಕಿಗರಿಗೆ ವಹಿಸಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಪ್ರಚಾರ ಕೈಗೊಳ್ಳುತ್ತಿರುವ ಕಾರ್ಯಕರ್ತರು, ಬೆಂಬಲಿಗರು ನೀತಿಸಂಹಿತೆ ಪಾಲಿಸುತ್ತಿದ್ದಾರೆಯೋ ಇಲ್ಲವೋ ಎಂಬ ಬಗ್ಗೆ ನಿಗಾ ವಹಿಸುವ ಜವಾಬ್ದಾರಿಯನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್, ವೀಕ್ಷಕರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಯೊಂದಿಗೆ ಗ್ರಾಮ ಲೆಕ್ಕಿಗರಿಗೂ ನೀಡಲಾಗಿದೆ.

ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, ಮತದಾರರಿಗೆ ಆಮಿಷ ಒಡ್ಡಿ ಹಣ ಮತ್ತು ಮದ್ಯ ನೀಡುವುದಕ್ಕೆ ಕಡಿವಾಣ ಹಾಕಲು ಗ್ರಾಮ ಲೆಕ್ಕಿಗರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳ ಬಗ್ಗೆ `ನಿಗಾ' ಇಡುವಂತೆ ಅವರಿಗೆ ಸೂಚಿಸಲಾಗಿದೆ.

ಗ್ರಾಮಮಟ್ಟದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಬಗ್ಗೆ ಉಳಿದ ಅಧಿಕಾರಿಗಳಿಗಿಂತ ಗ್ರಾಮಲೆಕ್ಕಿಗರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ಮತ್ತು ಅವರ ಕಡೆಯವರು ಕೈಗೊಳ್ಳುವ ಕಾರ್ಯಕ್ರಮಗಳ ವಿವರಗಳು ಹಾಗೂ ಭೇಟಿ ಮಾಡುವವರ ಮಾಹಿತಿಯನ್ನು ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಹೊಣೆ ವಹಿಸಲಾಗಿದೆ.

ಏನು ಮಾಡಬೇಕು?: ಗ್ರಾಮ ಮಟ್ಟದವರೆಗೆ ಸಿಬ್ಬಂದಿ ಹೊಂದಿರುವ ಏಕೈಕ ಇಲಾಖೆ ಎಂದರೆ ಅದು ಕಂದಾಯ ಇಲಾಖೆ. ಹೀಗಾಗಿ, ಈ ಇಲಾಖೆಯ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಗ್ರಾಮ ಲೆಕ್ಕಿಗರು, ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳ ಮಾಹಿತಿಯನ್ನು ಮೇಲಧಿಕಾರಿ ಗಮನಕ್ಕೆ ತರಬೇಕು ಅಥವಾ ನಿಯಂತ್ರಣ ಕೊಠಡಿಗೆ ರವಾನಿಸಬೇಕು. ಈ ಮಾಹಿತಿ ಸ್ವೀಕರಿಸಿ, ಮುಂದಿನ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಕಂದಾಯ ನಿರೀಕ್ಷಕರಿಗೆ ವಹಿಸಬೇಕು. ಗ್ರಾಮ ಲೆಕ್ಕಿಗರು ಎಲ್ಲ ರೀತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.

`ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ರಾಜಕೀಯ ಪಕ್ಷ ಆಮಿಷ ತೋರುತ್ತಾರೆ. ಇದನ್ನು ಗ್ರಾಮ ಲೆಕ್ಕಿಗರು  ಮೇಲಧಿಕಾರಿಗೆ ತಿಳಿಸಬೇಕು.  ಮಾಹಿತಿ ರವಾನಿಸುವುದಕ್ಕೆ ಸಂಬಂಧಿಸಿದಂತೆ ನಿಯೋಜಿತ ಗ್ರಾಮಲೆಕ್ಕಿಗರಿಗೆ `ವೈರ್‌ಲೆಸ್'ಗಳನ್ನು ನೀಡಬೇಕು' ಎಂದು ಚುನಾವಣಾ ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.