ADVERTISEMENT

ಚನ್ನಗಿರಿಯಲ್ಲಿ ಅಲೆಮಾರಿ ಮಹಿಳೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ `ಗೋಸಂಗಿ' ಅಲೆಮಾರಿ ಸಮುದಾಯದ ಮಹಿಳೆ ಆರ್. ಮಮತಾ ಬಿಎಸ್‌ಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಅವರು ಓದಿದ್ದು 7ನೇ ತರಗತಿವರೆಗೆ.

`ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡೆ. ಮೂವರು ಮಕ್ಕಳಿದ್ದಾರೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದೇನೆ, ಸ್ವಾವಲಂಬಿಯಾಗಿದ್ದೇನೆ. ಆದರೆ, ಗೋಸಂಗಿ ಸೇರಿದಂತೆ ಇತರ ಅಲೆಮಾರಿ ಸಮುದಾಯಗಳಲ್ಲಿ  ರಾಜಕೀಯ ಪ್ರಜ್ಞೆ ಇನ್ನೂ ಮೂಡಿಲ್ಲ. ಅಲೆಮಾರಿ ಸಮುದಾಯಗಳಿಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲವಿಲ್ಲ. ರಾಜಕೀಯ ಶಕ್ತಿಯೂ ಇಲ್ಲ. ಬಿಎಸ್‌ಪಿಯ ಮುಖಂಡರಾದ ಮಾಯಾವತಿ ಹಾಗೂ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಬೆಂಬಲದಿಂದಾಗಿ ಚುನಾವಣೆಗೆ ನಿಂತಿದ್ದೇನೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಲೆಮಾರಿ ಸಮುದಾಯದ ಸುಮಾರು 15 ಸಾವಿರ ಮತದಾರರಿದ್ದಾರೆ. 22 ಸಾವಿರ ಎಸ್‌ಸಿ, ಎಸ್‌ಟಿ ಮತದಾರರಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧಿಸುವ ಮನೋಭಾವ ಮುಖ್ಯ ಎಂದು ಭಾವಿಸಿ ಸ್ಪರ್ಧಿಸಿದ್ದೇನೆ' ಎನ್ನುತ್ತಾರೆ ಮಮತಾ.

`ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕೈಗೊಂಡಿದ್ದೇನೆ. ಅಲೆಮಾರಿ ಸಮುದಾಯದ ಜನರು ಸೇರಿದಂತೆ ಇತರರೂ ಪ್ರೋತ್ಸಾಹ ನೀಡುತ್ತಿದ್ದಾರೆ. ವಿಶೇಷವಾಗಿ ಅಲೆಮಾರಿ ಸಮುದಾಯದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏ. 16ರಂದು ನಾಮಪತ್ರ ಸಲ್ಲಿಸುತ್ತೇನೆ' ಎಂದು ಅವರು ಹೇಳಿದರು.

`ಅಲೆಮಾರಿಗಳು ರಾಜಕಾರಣಿಗಳಿಗೆ ಮತಬ್ಯಾಂಕ್ ಅಲ್ಲ. ಅವರ ಬಳಿ ಯಾವುದೇ ಬಂಡವಾಳವೂ ಇಲ್ಲ. ಹಾಗಾಗಿ, ಅವರ ಬಗ್ಗೆ ರಾಜಕಾರಣಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರಾಜಕೀಯವಾಗಿ ಅಲೆಮಾರಿಗಳಿಗೆ ವಿಶೇಷ ಮೀಸಲು ನೀಡಬೇಕು. ಪ್ರಸಕ್ತ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದಿಂದ ಮಮತಾ ಸ್ಪರ್ಧಿಸುತ್ತಿದ್ದಾರೆ. ಹಿರಿಯೂರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲೂ ಅಲೆಮಾರಿಗಳು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ' ಎನ್ನುತ್ತಾರೆ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಡಾ. ಬಾಲಗುರುಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.