ADVERTISEMENT

ಚರ್ಚೆಗೆ ಗ್ರಾಸವಾದ ಶಾಲಿನಿ ಸುದೀರ್ಘ ರಜೆ

ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಸಚಿವ ತನ್ವೀರ್‌ ಸೇಠ್ ಪತ್ರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:52 IST
Last Updated 17 ಮಾರ್ಚ್ 2018, 19:52 IST
ಚರ್ಚೆಗೆ ಗ್ರಾಸವಾದ ಶಾಲಿನಿ ಸುದೀರ್ಘ ರಜೆ
ಚರ್ಚೆಗೆ ಗ್ರಾಸವಾದ ಶಾಲಿನಿ ಸುದೀರ್ಘ ರಜೆ   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ 15 ದಿನಗಳ ದೀರ್ಘಾವಧಿ ರಜೆ ಮೇಲೆ ತೆರಳಿರುವುದು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಸಚಿವ ತನ್ವೀರ್‌ ಸೇಠ್ ಮತ್ತು ಶಾಲಿನಿ ರಜನೀಶ್‌ ಮಧ್ಯೆ ಸಮನ್ವಯ ಕೊರತೆ ಉಂಟಾಗಿತ್ತು. ಈ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಪತ್ರ ಬರೆದಿದ್ದರು. ಅದರ ಬೆನ್ನಲ್ಲೆ ಅವರು ಸುದೀರ್ಘ‌ ರಜೆ ಪಡೆದಿದ್ದಾರೆ.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಶಾಲಿನಿ ರಜನೀಶ್‌ ಅವರನ್ನು ವರ್ಗಾವಣೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇಠ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಭಾರ ಜವಾಬ್ದಾರಿ ವಹಿಸಬೇಕು ಎಂದು ಕೋರಿ ಫೆ. 24ರಂದು ತನ್ವೀರ್‌ ಸೇಠ್  ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ADVERTISEMENT

ಶಿಕ್ಷಣ ಇಲಾಖೆ ಹೊಣೆಯನ್ನು ಶಾಲಿನಿ ರಜನೀಶ್‌ ವಹಿಸಿಕೊಂಡಂದಿನಿಂದ ಆಡಳಿತಾತ್ಮಕ ವಿಚಾರದಲ್ಲಿ ಸಚಿವರ ಜೊತೆ ಭಿನ್ನಾಭಿಪ್ರಾಯ ಮೂಡಿತ್ತು. ಇಬ್ಬರ ನಡುವಿನ ಮನಸ್ತಾಪ ಕೆಲವು ಸಭೆಗಳಲ್ಲೂ ಎದ್ದು ಕಾಣುತ್ತಿತ್ತು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಶಾಲಿನಿ ರಜನೀಶ್‌ ಇದೇ 13ರಿಂದ ರಜೆ ಮೇಲೆ ತೆರಳಿದ್ದಾರೆ. ಈಗ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಮಾರ್ಚ್ 23ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಇಲಾಖೆಯ ಮುಖ್ಯಸ್ಥರಾಗಿ ಈ ಅವಧಿಯಲ್ಲಿ ಅವರು ರಜೆ ಹಾಕಿರುವುದು ಎಷ್ಟು ಸರಿ’ ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.