ADVERTISEMENT

ಚರ್ಚೆಗೆ ಪಟ್ಟು: ಚಕಮಕಿ,ಗದ್ದಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಪಕ್ಷೇತರ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದ ಪರಿಣಾಮ ವಿಧಾನಸಭೆಯಲ್ಲಿ ಬುಧವಾರ ಮಾತಿನ ಚಕಮಕಿ, ಗದ್ದಲ ಉಂಟಾದ ಕಾರಣ ಕಲಾಪವನ್ನು ಮುಂದೂಡಲಾಯಿತು.

ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರ ಕ್ರಮ ಪಕ್ಷಪಾತದಿಂದ ಕೂಡಿದೆ, ದುರುದ್ದೇಶಪೂರಿತ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಈ ಕುರಿತ ಚರ್ಚೆಗೆ ನಿಲುವಳಿ ಸೂಚನೆಯಡಿ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಇದಕ್ಕೆ ಆಡಳಿತಾರೂಢ ಬಿಜೆಪಿ ಸದಸ್ಯರು ಆಕ್ಷೇಪಿಸಿದರು.

`ಅಸಾಂವಿಧಾನಿಕ ಆದೇಶವೊಂದರಿಂದ ಈ ಸರ್ಕಾರ ಉಳಿದುಕೊಂಡಿದೆ. ಹೀಗಾಗಿ ಇದು ಕಾನೂನುಬಾಹಿರ ಸರ್ಕಾರ. ಅವಿಶ್ವಾಸ ನಿರ್ಣಯ ವೇಳೆ ಕಲಾಪದಲ್ಲಿ ಪಾಲ್ಗೊಳ್ಳಲು ಈ ಶಾಸಕರಿಗೆ ಅವಕಾಶ ನೀಡಿದ್ದರೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಗಿನ ಸರ್ಕಾರ ಪತನವಾಗುತ್ತಿತ್ತು~ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ADVERTISEMENT

ಪ್ರಜಾಪ್ರಭುತ್ವದ ಇತಿಹಾಸದಲ್ಲಿ ದೇಶದಲ್ಲಿ ಎಂದೂ ಎಲ್ಲಿಯೂ ಈ ಬಗೆಯ ಆದೇಶ ಆಗಿಲ್ಲ. ಇದರಿಂದ ಐವರು ಶಾಸಕರು ಅವಮಾನ, ಮಾನಸಿಕ ಯಾತನೆಗೆ ಒಳಗಾಗಬೇಕಾಯಿತು. ಸಭಾಧ್ಯಕ್ಷ ಪೀಠದ ಘನತೆಗೆ ಚ್ಯುತಿ ಆಗಿದೆ. ಕಳಂಕ ಹೊತ್ತವರು ಸ್ಪೀಕರ್ ಸ್ಥಾನದಲ್ಲಿ ಇರಬಾರದು ಎಂದು ಅವರು ಆಗ್ರಹಿಸಿದರು. ಆಗ ಪೀಠದಲ್ಲಿ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಇದ್ದರು.

ಸಭಾಧ್ಯಕ್ಷರು ಸದನದ ರಕ್ಷಕ. ಅವರ ನಿರ್ಣಯಗಳ ಕುರಿತಂತೆ ನ್ಯಾಯಾಲಯಕ್ಕೆ ಮಧ್ಯಪ್ರವೇಶಿಸಲು ಅವಕಾಶ ಇಲ್ಲ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ವಾದಿಸಿದರು. `ಈ ವಿಷಯ ನಿಲುವಳಿ ಸೂಚನೆ ವ್ಯಾಪಿಗೆ ಬರುವುದಿಲ್ಲ~ ಎಂದರು ಮಾಜಿ ಸ್ಪೀಕರ್ ಜಗದೀಶ ಶೆಟ್ಟರ್. ಸಚಿವ ಎಸ್.ಎ. ರಾಮದಾಸ್ ಕ್ರಿಯಾಲೋಪ ಎತ್ತಿದರು. ಸಿ.ಸಿ.ಪಾಟೀಲ ಅದಕ್ಕೆ ದನಿಗೂಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯ ದುರುಪಯೋಗ ಆಗಿದೆ. ಅದರ ಹೊಣೆ ಹೊತ್ತು ಸ್ಪೀಕರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ನ ವಿ. ಶ್ರೀನಿವಾಸ ಪ್ರಸಾದ್ ಅವರು ಒತ್ತಾಯಿಸಿದರು.

ಕೋರ್ಟ್ ತೀರ್ಪಿಗೆ ತಲೆಬಾಗಬೇಕು ಎಂದು ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ಆಗ್ರಹಿಸಿದರು. ಆಗ ಮಧ್ಯಪ್ರವೇಶಿಸಿದ ಸುರೇಶ್‌ಕುಮಾರ್ `ತೀರ್ಪಿಗೆ ತಲೆಬಾಗುತ್ತೇವೆ. ಆದರೆ ತೀರ್ಪನ್ನು ವ್ಯಾಖ್ಯಾನಿಸಲು ಹಕ್ಕಿದೆ~ ಎಂದರು.

ಸುಪ್ರೀಂಕೋರ್ಟ್ ತೀರ್ಪು ನೆಲದ ಕಾನೂನಾಗುತ್ತದೆ. ಪರಿಷ್ಕರಣೆಗೆ ಒಳಗಾಗದ ಹೊರತು ಅದಕ್ಕೆ ಎಲ್ಲರೂ ಬದ್ಧರಾಗಿ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದರ ಮಧ್ಯೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಿಗೆ ಎದ್ದು ವಾಗ್ವಾದದಲ್ಲಿ ತೊಡಗಿದರು. ಕೊನೆಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಇಲ್ಲ ಎಂದು ಉಪಸಭಾಧ್ಯಕ್ಷರು ರೂಲಿಂಗ್ ನೀಡಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಧರಣಿ: ಮಧ್ಯಾಹ್ನದ ಬಳಿಕ ಮತ್ತೆ ಸದನ ಆರಂಭವಾಗುತ್ತಿದ್ದಂತೆಯೇ ಐವರು ಪಕ್ಷೇತರ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಸ್ಪೀಕರ್ ಬೋಪಯ್ಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಧರಣಿ ನಡೆಸಿದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ನೀಡಬೇಕು ಎಂದು ಮತ್ತೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯೋಗೀಶ್ ಭಟ್, `ಈಗಾಗಲೇ ರೂಲಿಂಗ್ ನೀಡಿ ಆಗಿದೆ. ಬೇರೆ ರೂಪದಲ್ಲಿ ತನ್ನಿ, ಆಗ ನೋಡೋಣ~ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, `ನಿಯಮಾವಳಿ ಪ್ರಕಾರ ಸಭಾಧ್ಯಕ್ಷರು ರೂಲಿಂಗ್ ನೀಡಿದ ನಂತರ ಮತ್ತೆ ಆ ವಿಷಯ ಪ್ರಸ್ತಾಪಿಸುವುದು ಸರಿಯಲ್ಲ. ಮುಂದಿನ ವಿಷಯಗಳನ್ನು ತೆಗೆದುಕೊಳ್ಳಿ~ ಎಂದು ಸ್ಪೀಕರ್‌ಗೆ ಮನವಿ ಮಾಡಿದರು.

ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀರ್ಪು ಮತ್ತು ಸಂವಿಧಾನದ ಬಗ್ಗೆ ಗೌರವವಿಲ್ಲ. ಇದು ಕಾನೂನುಬಾಹಿರ ಸರ್ಕಾರ. ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ಯೋಗೀಶ್ ಭಟ್ ಅವರು ಸದನವನ್ನು ಗುರುವಾರ ಬೆಳಿಗ್ಗೆ 11ಕ್ಕೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಸಭಾಧ್ಯಕ್ಷರೇ ಗೈರು!

ಬುಧವಾರ ವಿಧಾನಸಭೆ ಸೇರಿದಾಗ ಪ್ರತಿಪಕ್ಷಗಳ ಸದಸ್ಯರು ಒಂದು ಕ್ಷಣ ಚಕಿತರಾದರು. `ಹ್ಹೋ...~ ಎಂದು ಕೂಗಿದರು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸ್ಪೀಕರ್ ವಿರುದ್ಧ ಪ್ರತಿಭಟಿಸಲು ಸಜ್ಜಾಗಿದ್ದವು. ಆದರೆ, ಸ್ಪೀಕರ್ ಕೆ.ಜಿ. ಬೋಪಯ್ಯ ಸದನಕ್ಕೆ ಬರಲಿಲ್ಲ. ಅವರ ಬದಲಿಗೆ ಉಪಸಭಾಧ್ಯಕ್ಷ ಯೋಗೀಶ್ ಭಟ್ ಸ್ಪೀಕರ್ ಪೀಠದಲ್ಲಿ ಕುಳಿತು ಕಲಾಪ ನಡೆಸಿದರು.

ಬೋಪಯ್ಯ ಬೆಳಿಗ್ಗೆಯಿಂದ ಸಂಜೆವರೆಗೂ ವಿಧಾನಸೌಧದ ತಮ್ಮ ಕಚೇರಿಯಲ್ಲಿಯೇ ಇದ್ದರೂ ಸದನಕ್ಕೆ ಬಾರದಿದ್ದುದು ಚರ್ಚೆಗೆ ಗ್ರಾಸವಾಯಿತು.  ಸ್ಪೀಕರ್ ಅವರು ಕಲಾಪದಲ್ಲಿ ಭಾಗವಹಿಸಿದರೆ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿಯುತ್ತವೆ ಎಂಬ ಉದ್ದೇಶದಿಂದ ಬಿಜೆಪಿ ಉದ್ದೇಶಪೂರ್ವಕವಾಗಿಯೇ ಬುಧವಾರ ಅವರಿಗೆ ಕಲಾಪದಲ್ಲಿ ಭಾಗವಹಿಸದಂತೆ ಸೂಚನೆ ನೀಡಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.