ADVERTISEMENT

ಚರ್ಚ್ ಮೇಲೆ ದಾಳಿ ಪ್ರಕರಣ: 10 ಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬೆಂಗಳೂರು: ನಿಷೇಧಿತ ದೀನ್‌ದಾರ್ ಅಂಜುಮಾನ್ ಸಂಘಟನೆಯ ಸದಸ್ಯರು ರಾಜ್ಯದ ವಿವಿಧೆಡೆ ಚರ್ಚ್‌ಗಳ ಮೇಲೆ 2000ನೇ ಇಸವಿಯಲ್ಲಿ ನಡೆಸಿದ ದಾಳಿ ಪ್ರಕರಣವೊಂದರ 11 ಆರೋಪಿಗಳ ಪೈಕಿ 10 ಜನರನ್ನು ಹೈಕೋರ್ಟ್ ಬುಧವಾರ ದೋಷಮುಕ್ತಗೊಳಿಸಿದೆ. ಒಬ್ಬ ಆರೋಪಿ ಸೈಯದ್ ಮಹಮದ್ ಇಬ್ರಾಹಿಂಗೆ ಅಧೀನ ನ್ಯಾಯಾಲಯ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು, 10 ವರ್ಷಗಳ ಜೈಲುವಾಸದ ಶಿಕ್ಷೆಯನ್ನಾಗಿ ಪರಿವರ್ತಿಸಿ ಆದೇಶಿಸಿದೆ.

ಬೆಂಗಳೂರಿನ ಮಾಗಡಿ ರಸ್ತೆಯ ಚರ್ಚ್‌ವೊಂದರ ಮೇಲೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ. 11 ಜನ ಆರೋಪಿಗಳ ಪೈಕಿ ನಾಲ್ವರಿಗೆ ಅಧೀನ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇನ್ನುಳಿದ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಈ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಬೆಂಗಳೂರಿನ ಜಗಜೀವನರಾಂ ನಗರ, ಗುಲ್ಬರ್ಗ ಜಿಲ್ಲೆ ವಾಡಿಯ ಸೇಂಟ್ ಆನ್ಸ್ ಕ್ಯಾಥೋಲಿಕ್ ಚರ್ಚ್ ಹಾಗೂ ಹುಬ್ಬಳ್ಳಿಯ ಕೇಶ್ವಾಪುರದ ಚರ್ಚ್‌ಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಈ ಆರೋಪಿಗಳ ವಿರುದ್ಧದ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಹುಸೇನ್, ಬಿಇಎಂಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ಸೇಠ್ ಮತ್ತು ಎ.ಎ. ಮುಲ್ಲಾ ಅವರಿಗೆ ವಿಧಿಸಿದ್ದ ಮರಣದಂಡನೆಯನ್ನು ನ್ಯಾಯಪೀಠ ರದ್ದು ಮಾಡಿದೆ. ಆರೋಪಿಗಳೇ ಬಾಂಬ್ ಸ್ಫೋಟಿಸಿದ್ದಾರೆ ಎಂದು ಹೇಳಲು ಪ್ರಬಲ ಸಾಕ್ಷ್ಯಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಶೇಖ್ ಹಾಶಿಂ, ಮಹಮದ್ ಫಾರೂಕ್, ಮಹಮದ್ ಸಿದ್ದಿಕ್ ಅಬ್ದುಲ್ ಹಬೀಬ್, ಶಂಸುಜಮ್ಮ, ಶೇಖ್ ಫರ್ದೀನ್ ವಾಲಿ ಮತ್ತು ಸೈಯದ್ ಅಬ್ದುಲ್ ಖಾದರ್ ಜಿಲಾನಿ ಅವರನ್ನು ದೋಷಮುಕ್ತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT