ADVERTISEMENT

ಚರ್ಚ್ ಸರಣಿ ದಾಳಿ: ಒಬ್ಬ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು:  ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ 2008-09ರಲ್ಲಿ ಚರ್ಚ್‌ಗಳ ಮೇಲೆ ನಡೆದಿದ್ದ ಸರಣಿ ದಾಳಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಮದಗೊಂಡಪಲ್ಲಿಯ ಸಜ್ಜನ್‌ಕುಮಾರ್ ಉರುಫ್ ಬಾಬು (33) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಹಿಂದೂಪರ ಸಂಘಟನೆಯೊಂದರ ಸದಸ್ಯನಾದ ಸಜ್ಜನ್‌ಕುಮಾರ್ ಬೆಂಗಳೂರು, ಅತ್ತಿಬೆಲೆ, ಹೆಬ್ಬಗೋಡಿ, ತಮಿಳುನಾಡಿನ ಮತ್ತಿಗಿರಿ ಠಾಣೆ ವ್ಯಾಪ್ತಿಯ ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದ. ಬಿ.ಕಾಂ ಪದವೀಧರನಾದ ಆತ ಟೈಲ್ಸ್ ವ್ಯಾಪಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

`ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದನ್ನು ವಿರೋಧಿಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಪಾಠ ಕಲಿಸುವ ಉದ್ದೇಶದಿಂದ ಚರ್ಚ್‌ಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ' ಎಂದು ನಗರ ಅಪರಾಧ ವಿಭಾಗದ (ಸಿಸಿಬಿ) ಡಿಸಿಪಿ ವಿ.ಎಸ್.ಡಿಸೋಜಾ `ಪ್ರಜಾವಾಣಿ'ಗೆ ತಿಳಿಸಿದರು.

`ಸಜ್ಜನ್‌ಕುಮಾರ್ ಜತೆ ಇತರೆ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ. ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ  ಎಚ್.ಸಿದ್ದಪ್ಪ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.