ADVERTISEMENT

ಚಲನಚಿತ್ರ ನಟ, ಸಂಭಾಷಣೆಗಾರ ಕುಣಿಗಲ್ ನಾಗಭೂಷಣ್ ನಿಧನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸಂಭಾಷಣಾಕಾರ, ನಟ ಕುಣಿಗಲ್ ನಾಗಭೂಷಣ್ (68) ಶನಿವಾರ ಮಧ್ಯರಾತ್ರಿ 1.20ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ದೀರ್ಘ ಕಾಲದ ಮೂತ್ರಪಿಂಡ ವೈಫಲ್ಯ, ಹೃದ್ರೋಗ ಸಮಸ್ಯೆ ಮತ್ತು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಮಧುಮೇಹಕ್ಕೂ ತುತ್ತಾಗಿದ್ದ ಅವರು ಬಲಗಾಲನ್ನು ಸಹ ಕಳೆದುಕೊಂಡಿದ್ದರು.

ಶನಿವಾರ ರಾತ್ರಿ ಟೀವಿ ವೀಕ್ಷಿಸುತ್ತಿದ್ದ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುಗೆ ವರ್ಗಾಯಿಸಲಾಯಿತು. ಚಿಕಿತ್ಸೆ ವೇಳೆಯೇ ಎರಡು ಬಾರಿ ಹೃದಯಾಘಾತಕ್ಕೆ ಒಳಗಾದ ಅವರು ತಡರಾತ್ರಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1945 ಡಿಸೆಂಬರ್ 6ರಂದು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಜನಿಸಿದ ನಾಗಭೂಷಣ್, ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪದವಿ ಪಡೆದರು. 1961ರಲ್ಲಿ ರಾಜ್‌ಕುಮಾರ್ ಅಭಿನಯದ `ನಾಂದಿ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸಹಾಯಕ ನಿರ್ದೇಶಕರಾಗಿ ಸುಮಾರು 40 ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ ಅವರು, `ಸಿಂಹ ಸ್ವಪ್ನ' ಚಿತ್ರದ ಮೂಲಕ ಅವರು ಸಂಭಾಷಣಾಕಾರರಾಗಿ ಪರಿಚಿತರಾದರು. 250ಕ್ಕೂ ಅಧಿಕ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. `ಗೌರಿ ಗಣೇಶ' ಮತ್ತು `ಯಾರಿಗೂ ಹೇಳ್ಬೇಡಿ' ಸಿನಿಮಾಗಳ ಸಂಭಾಷಣೆಗೆ ರಾಜ್ಯಪ್ರಶಸ್ತಿ ಲಭಿಸಿತ್ತು.

ನಟ ರಜನಿಕಾಂತ್ ಅವರನ್ನು ಬೆಳ್ಳಿತೆರೆಗೆ ಕರೆತಂದ ಕೀರ್ತಿ ಕುಣಿಕಲ್ ಅವರದು. ಕುಣಿಗಲ್ ನಾಗಭೂಷಣ್ ನಿರ್ದೇಶಿಸಿದ `ಬಾಳುಜೇನು' ಚಿತ್ರದಲ್ಲಿ ರಜನಿಕಾಂತ್ ನಟಿಸಿದ್ದರು. `ಆಶೀರ್ವಾದ' ಅವರ ನಿರ್ದೇಶನದ ಮತ್ತೊಂದು ಚಿತ್ರ. ಬಳಿಕ ನಿರ್ದೇಶನ ಕ್ಷೇತ್ರದಿಂದ ಹೊರಬಂದ ಅವರು ಚಿತ್ರಕಥೆ, ಸಂಭಾಷಣೆ ರಚನೆ ಹಾಗೂ ನಟನೆಯಲ್ಲಿ ತೊಡಗಿಸಿಕೊಂಡರು.

ವಿಷ್ಣುವರ್ಧನ್ ನಾಯಕರಾಗಿ ನಟಿಸಿದ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. `ಸಿಂಹ ಜೋಡಿ', `ಸಿಂಹ ಗರ್ಜನೆ', `ಸಾಂಗ್ಲಿಯಾನ', `ಎಸ್‌ಪಿ ಸಾಂಗ್ಲಿಯಾನ' ಮುಂತಾದವು ಅವರು ಕಥೆ ಹೆಣೆದ ಪ್ರಮುಖ ಚಿತ್ರಗಳು. ರಾಜ್‌ಕುಮಾರ್ ಜೊತೆ `ನಾಂದಿ', `ಸಿಪಾಯಿ ರಾಮು', `ಕುಲಗೌರವ' ಚಿತ್ರಗಳಲ್ಲಿ ದುಡಿದ ಅವರು, ವಿಷ್ಣುವರ್ಧನ್, ಶಂಕರ್‌ನಾಗ್, ಅನಂತನಾಗ್, ಅಂಬರೀಷ್, ರವಿಚಂದ್ರನ್, ಶಶಿಕುಮಾರ್, ಶಿವರಾಜ್‌ಕುಮಾರ್, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್ ಮುಂತಾದ ನಟರ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರರಂಗದಲ್ಲಿ ಐವತ್ತು ವರ್ಷದ ಸೇವೆ ಪೂರೈಸಿದ ಅವರು, ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಿಂದ ಜನಪ್ರಿಯರಾದ ಕುಣಿಗಲ್ ನಟಿಸಿದ ಮೊದಲ ಚಿತ್ರ `ನಮ್ಮೂರ ರಾಜ'. ರೀಮೇಕ್ ಚಿತ್ರಗಳನ್ನು ಕನ್ನಡದ ಪರಿಸರಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ತೆಲುಗಿನಲ್ಲಿ ಸೋತ ಒಂದು ಸಿನಿಮಾವನ್ನು ಕನ್ನಡದಲ್ಲಿ `ಗೋಲ್‌ಮಾಲ್ ಭಾಗ-1 ಮತ್ತು ಭಾಗ-2 ಹೆಸರಿನಲ್ಲಿ ಎರಡು ಸಿನಿಮಾ ಮಾಡಿ ಯಶಸ್ಸು ನೀಡಿದ ಹೆಗ್ಗಳಿಕೆ ಅವರದು. `ಅಭಿಮಾನಿ' ಅವರು ಸಂಭಾಷಣೆ ಬರೆದ ಕೊನೆಯ ಸಿನಿಮಾ.

ಕೆಲವು ಕಾಲ ಕಿರುತೆರೆಯಲ್ಲಿಯೂ ದುಡಿದಿದ್ದರು. ಚಿತ್ರರಂಗದಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾಗತೊಡಗಿದಾಗ ಮತ್ತೆ ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದರು. `ಕಲ್ಯಾಣಿ' ಮತ್ತು `ಪೌರ್ಣಿಮೆ' ಅವರು ಅಭಿನಯಿಸಿದ ಪ್ರಮುಖ ಧಾರಾವಾಹಿಗಳು. ಕಳೆದ ವರ್ಷ ಬೈಪಾಸ್ ಸರ್ಜರಿ ಮತ್ತು ಗ್ಯಾಂಗ್ರಿನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಣಿಗಲ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.