ADVERTISEMENT

ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರ ದಂಡು: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಮೈಸೂರು: ಅರಮನೆ ನಗರಿ ಮೈಸೂರಿಗೆ ಹೊಸ ವರ್ಷಾಚರಣೆ, ವಾರದ ರಜೆ ಕಳೆಯಲು ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಸುಮಾರು 4 ಗಂಟೆಗೂ ಹೆಚ್ಚು  ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು.

ಬೆಟ್ಟದ ಬುಡದಿಂದ ತುದಿಯ ತನಕ (4.ಕಿ.ಮೀ) ವಾಹನಗಳು ರಸ್ತೆಯಲ್ಲಿ ನಿಂತ ಕಾರಣ ಸಾವಿರಾರು ಮಂದಿ ಪರದಾಡುವಂತಾಯಿತು.

ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅಯ್ಯಪ್ಪಸ್ವಾಮಿ ಭಕ್ತರು ಪ್ರವಾಸಕ್ಕಾಗಿ ನಗರಕ್ಕೆ ಲಗ್ಗೆ ಇಟ್ಟಿದ್ದರು. ಬೆಳಿಗ್ಗೆಯಿಂದಲೇ ಬೈಕ್‌ಗಳು, ಕಾರುಗಳು, ಬಸ್ಸುಗಳು, ಟೆಂಪೋಗಳಲ್ಲಿ ಏಕ ಕಾಲಕ್ಕೆ ಚಾಮುಂಡಿ ಬೆಟ್ಟದತ್ತ ಹೊರಟರು. ಸ್ಥಳೀಯರು ಹೊಸ ವರ್ಷದ ಹಿನ್ನೆಲೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ತೆರಳಿದರು.

ಮಧ್ಯಾಹ್ನ 12 ರಿಂದ ಸಂಜೆ 4ರ ವರಿಗೆ ಈ ಸಂಖ್ಯೆ ದ್ವಿಗುಣವಾಯಿತು. ಇದರಿಂದಾಗಿ ಪೂರ್ವ ಮಾಹಿತಿ ಇರದ ಪೊಲೀಸರಿಗೆ ಸಂಚಾರ ನಿಯಂತ್ರಣ ಕಷ್ಟವಾಯಿತು. ಬಳಿಕ ಎಚ್ಚೆತ್ತುಕೊಂಡ ಸಿಬ್ಬಂದಿ ತಾವರೆಕಟ್ಟೆಯಿಂದ ಬೆಟ್ಟದವರಿಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

`ಹಿಂದೆಂದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಬಂದಿರುವುದನ್ನು ನೋಡಿರಲಿಲ್ಲ. ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದಾರೆ. ನಮ್ಮ ಅನುಭವದಂತೆ ಆಷಾಢ ಶುಕ್ರವಾರದಲ್ಲೂ ಇಷ್ಟೊಂದು ಜನ ಬಂದಿರಲಿಲ್ಲ~  ಎಂದು ಸ್ಥಳೀಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.