ADVERTISEMENT

ಚಾಮುಂಡೇಶ್ವರಿ ದೇಗುಲದ ಹುಂಡಿಯ ₹ 66 ಸಾವಿರ ಕಳವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:24 IST
Last Updated 27 ಮಾರ್ಚ್ 2017, 20:24 IST

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇಗುಲದ ಹುಂಡಿಯ ಹಣ ಎಣಿಕೆಯ ಸಂದರ್ಭದಲ್ಲಿ ₹ 66,160 ಕಳವು ಮಾಡಿದ ನಾಲ್ವರು ಕೆ.ಆರ್‌.ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗಾಯತ್ರಿಪುರಂನ ಸಚಿನ್‌ (24), ಜಗದೀಶ್‌ (31), ವಿನೋದ್‌ (28) ಹಾಗೂ ಅನಸೂಯಾ (45) ಬಂಧಿತರಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಹುಂಡಿ ಹಣ ಎಣಿಕೆ ಮಾಡಲಾಗುತ್ತದೆ. ಕೆನರಾ ಬ್ಯಾಂಕ್‌ ಇದರ ಗುತ್ತಿಗೆ ಪಡೆದಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಯುತ್ತದೆ. ಎಣಿಕೆಗೆ ಸ್ತ್ರೀಶಕ್ತಿ ಹಾಗೂ ಸ್ವಯಂ ಸೇವಕ ಸಂಘದ ಸದಸ್ಯರ ನೆರವು ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

60 ಕೆಲಸಗಾರರು ಹಾಗೂ ಕೆನರಾ ಬ್ಯಾಂಕ್‌ನ 25 ಸಿಬ್ಬಂದಿ ಸೋಮವಾರ ಹುಂಡಿ ಹಣ ಎಣಿಕೆಗೆ ನಿಯೋಜನೆಗೊಂಡಿದ್ದರು. ದೇಗುಲದ ಆವರಣದಲ್ಲಿರುವ 8 ಹುಂಡಿಗಳನ್ನು ಒಡೆದು ಎಣಿಕೆ ಮಾಡಲಾಗುತ್ತಿತ್ತು. ಈ ನಾಲ್ವರು ಆರೋಪಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದು ಬ್ಯಾಂಕ್‌ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ADVERTISEMENT

ಸ್ಥಳಕ್ಕೆ ಧಾವಿಸಿದ ಕೆ.ಆರ್‌.ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ಯಾಂಟಿನ ಜೇಬು, ಬನಿಯನ್‌ ಹಾಗೂ ಕುಪ್ಪಸದಲ್ಲಿ ₹ 66 ಸಾವಿರ ಬಚ್ಚಿಟ್ಟುಕೊಂಡಿದ್ದರು ಎಂದು ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್‌ ಮಾಹಿತಿ ನೀಡಿದ್ದಾರೆ.
ಹುಂಡಿಯಲ್ಲಿ ಸಂಗ್ರಹವಾಗಿದ್ದ ವಿದೇಶಿ ಕರೆನ್ಸಿ ಸೇರಿದಂತೆ ₹ 80 ಲಕ್ಷವನ್ನು ಸೋಮವಾರ ಎಣಿಕೆ ಮಾಡಲಾಗಿದೆ. ಈ ಕಾರ್ಯ ಮುಂದುವರಿಯಲಿದ್ದು, ಅರಮನೆ ದೇಗುಲಗಳ ಎಣಿಕೆ ಮಂಗಳವಾರ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.