ADVERTISEMENT

ಚಿತ್ರಕಲಾ ಶಿಕ್ಷಣ ಕಡ್ಡಾಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:55 IST
Last Updated 18 ಫೆಬ್ರುವರಿ 2011, 17:55 IST

ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎನ್ನುವುದು ಸೇರಿದಂತೆ 9 ನಿರ್ಣಯಗಳನ್ನು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ 8 ನೇ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ  ಮೈಸೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ಎರಡು ದಿನಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ನಿರ್ಣಯಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು.

ರಾಜ್ಯ, ಹೊರರಾಜ್ಯದಲ್ಲಿ ಇರುವ ಚಿತ್ರಕಲಾ ಶಿಕ್ಷಣವನ್ನು ಅಧ್ಯಯನ ಮಾಡಿ ಅದರ ಸಾಧಕ, ಬಾಧಕಗಳನ್ನು ಪರಿಷ್ಕರಿಸಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮದಂತೆ ನೇಮಕಾತಿ ದಿನಾಂಕದಿಂದಲೇ ಎ.ಎಂ. ವೇತನ ಶ್ರೇಣಿ ನಿಗದಿ ಪಡಿಸಿದಂತೆ ನೀಡಬೇಕು. ಪ್ರತಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ವಿಷಯ ಪರಿವೀಕ್ಷಕರು ಮತ್ತು ಡಯಟ್‌ಗಳಲ್ಲಿ ಕಲಾಬೋಧಕರು ಹಾಗೂ ಡಿಎಸ್‌ಇಆರ್‌ಟಿ ಪಠ್ಯ ಪುಸ್ತಕ ನಿರ್ದೇಶನಾಲಯ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಧಾರವಾಡ ಮತ್ತು ಗುಲ್ಬರ್ಕ ಆಯುಕ್ತರ ಕಚೇರಿಯಲ್ಲಿ ಎಡಿಪಿಐ, ಎಸ್‌ಎಡಿಪಿಐ, ಡಿಡಿಪಿಐ ಹುದ್ದೆಗಳನ್ನು ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಡಿಡಿಪಿಐ ಹುದ್ದೆಯನ್ನು ಸೃಜಿಸಬೇಕು.

ಫೆ.2, 2000 ರ ನಂತರ ನೇಮಕಗೊಂಡ ಅನುದಾನಿತ ಮತ್ತು ಅನುದಾನಕ್ಕೆ ಒಳಪಡುವ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಬೇಕು ಹಾಗೂ ನಿವೃತ್ತಗೊಂಡ ಅಥವಾ ಮರಣದಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಸ್ಪಷ್ಟ ಆದೇಶ ನೀಡಬೇಕು. ಡಿಟಿಸಿ ಮತ್ತು ಡಿಎಂಸಿ ಪದವಿ ಪಡೆದ ಸೇವಾನಿರತ ಚಿತ್ರಕಲಾ ಶಿಕ್ಷಕರಿಗೆ ಆರ್ಟ್ ಮಾಸ್ಟರ್ ಪದವಿ ಇಲ್ಲವೇ ತತ್ಸಮಾನ ಪದವಿಯನ್ನು ಪಡೆಯಲು ಅವಕಾಶ ನೀಡಬೇಕು. ಚಿತ್ರಕಲಾ ಶಿಕ್ಷಕರಿಗೆ ಶೈಕ್ಷಣಿಕ ಅಭಿವೃದ್ಧಿಗೆ ಒಂದು ನಿವೇಶನವನ್ನು ಬೆಂಗಳೂರಿನಲ್ಲಿ ಮಂಜೂರು ಮಾಡಬೇಕು ಎಂದು ಸಮ್ಮೇಳನ ಸರ್ಕಾರವನ್ನು ಒತ್ತಾಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.