ADVERTISEMENT

ಚಿತ್ರದುರ್ಗದಲ್ಲಿ ಜಲಾವೃತವಾದ ರಸ್ತೆಗಳು: ಇಬ್ಬರು ಮಹಿಳೆಯರ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಚಿತ್ರದುರ್ಗದಲ್ಲಿ ಶುಕ್ರವಾರ ವರುಣನ ಆರ್ಭಟದಿಂದಾಗಿ ಬಿ.ಡಿ.ರಸ್ತೆ ಜಲಾವ್ರತವಾಗಿರುವುದು.
ಚಿತ್ರದುರ್ಗದಲ್ಲಿ ಶುಕ್ರವಾರ ವರುಣನ ಆರ್ಭಟದಿಂದಾಗಿ ಬಿ.ಡಿ.ರಸ್ತೆ ಜಲಾವ್ರತವಾಗಿರುವುದು.   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರವೂ ಮಳೆಯಾಗಿದೆ. ಸಿಡಿಲು ಬಡಿದು ಒಬ್ಬರು ಮತ್ತು ಗೋಡೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕು ಬೆಣ್ಣೂರ ಬಿ. ಗ್ರಾಮದಲ್ಲಿ ಸಿಡಿಲು ಬಡಿದು ಈರಮ್ಮ ನಾಗಪ್ಪ ನಾಯ್ಕೋಡಿ (28) ಶುಕ್ರವಾರ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ಮಂಜುಳಾ (26) ಎಂಬುವವರು ಸಾವಿಗೀಡಾಗಿದ್ದಾರೆ.

ರಾಮನಗರ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಭಾರಿ ಮಳೆಯಾಯಿತು. ಸಂಜೆ 5ರ ಸುಮಾರಿಗೆ ಮಳೆ ಆರಂಭಗೊಂಡಿದ್ದು, 7ರವರೆಗೂ ಸುರಿಯಿತು. ಈ ಎರಡು ಗಂಟೆಗಳಲ್ಲಿ ನಗರದಲ್ಲಿ 66.5 ಮಿಲಿಮೀಟರ್‌ನಷ್ಟು ಮಳೆ ಪ್ರಮಾಣ ದಾಖಲಾಯಿತು.

ADVERTISEMENT

ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸುರಿದ ಭಾರೀ ಮಳೆಯಿಂದಾಗಿ ಬಿ.ಡಿ.ರಸ್ತೆ, ಗಾಂಧಿ ವೃತ್ತ, ಆರ್‌ಟಿಒ ಕಚೇರಿ ರಸ್ತೆ, ಕೆಎಸ್‌ಆರ್‌ಟಿಸಿ ನಿಲ್ದಾಣದ ರಸ್ತೆಗಳು ಜಲಾವೃತಗೊಂಡವು. ತಾಲ್ಲೂಕಿನ ತುರುವನೂರು, ಭರಮಸಾಗರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.‌

ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿಯೂ ಮಳೆಯಾಗಿದೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಸೇಡಂ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಸೇಡಂನಲ್ಲಿ ಸುರಿದ ಮಳೆಯಿಂದ ಬಸ್‌ ನಿಲ್ದಾಣದ ಆವರಣ ಜಲಾವೃತಗೊಂಡಿತ್ತು.

ಕೊಪ್ಪಳದಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯಾಹ್ನ ಉತ್ತಮ ಮಳೆ ಸುರಿದಿದೆ. ಕುಕನೂರು ಸಮೀಪದ ಯರೇಹಂಚಿನಾಳ ಗ್ರಾಮದ ಬಳಿಯ ಹಳ್ಳ ಗುರುವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯಿತು. ಗುರುವಾರ ಮಂಡ್ಯ ಜಿಲ್ಲೆಯಾದ್ಯಂತ ಸರಾಸರಿ 113.94 ಮಿ.ಮೀ ಮಳೆಯಾಗಿದೆ.

ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿಯಿತು. ಕೆ.ಆರ್‌.ಪೇಟೆಯಲ್ಲಿ ಸಾರಿಗೆ ಬಸ್‌ ನಿಲ್ದಾಣ ಜಲಾವೃತವಾಗಿದೆ. ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಸಿಡಿಲಿನ ಆಘಾತ: ಸಮೀಪದಲ್ಲಿಯೇ ಹಾದು ಹೋದ ಸಿಡಿಲಿನಿಂದ ಗಾಬರಿಗೊಂಡ, ಸವದತ್ತಿ ತಾಲ್ಲೂಕಿನ ಮಳಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿಗಳು ಶುಕ್ರವಾರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಮಳೆ ಬಿರುಸು: ಶಿರಸಿ, ಸಿದ್ದಾಪುರ , ಭಟ್ಕಳದಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.