ADVERTISEMENT

ಚಿತ್ರದುರ್ಗ: ಗಣಿ ಪ್ರದೇಶ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST
ಚಿತ್ರದುರ್ಗ: ಗಣಿ ಪ್ರದೇಶ ಪರಿಶೀಲನೆ
ಚಿತ್ರದುರ್ಗ: ಗಣಿ ಪ್ರದೇಶ ಪರಿಶೀಲನೆ   

ಚಿತ್ರದುರ್ಗ: ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರೀಯ ಉನ್ನತಾಧಿಕಾರಿ ಸಮಿತಿ (ಸಿಇಸಿ) ಜಿಲ್ಲೆಯಲ್ಲಿನ ಗಣಿ ಪ್ರದೇಶವನ್ನು ಭಾನುವಾರ ಪರಿಶೀಲಿಸಿತು. ಗಣಿಗಾರಿಕೆಯಿಂದ ಪರಿಸರ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಸಿಇಸಿ ತಂಡ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.

ಸಿಇಸಿ ಮುಖ್ಯಸ್ಥ ಪಿ.ವಿ. ಜಯಕೃಷ್ಣನ್ ಮತ್ತು ಸದಸ್ಯ ಮಹೇಂದ್ರ ವ್ಯಾಸ್ ಪರಿಶೀಲನೆಗೆ ಆಗಮಿಸಿದ್ದಾರೆ. ಇವರೊಂದಿಗೆ ಅಕ್ರಮ ಗಣಿಗಾರಿಕೆ ತನಿಖಾ ಆಯೋಗದ ಅಧಿಕಾರಿ ಡಾ.ಯು.ವಿ. ಸಿಂಗ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಎಚ್.ಆರ್. ಶ್ರೀನಿವಾಸ್ ಸಹ ಆಗಮಿಸಿದ್ದಾರೆ.

ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಉದಯ ಶಂಕರ್, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸಿದರು. ಸಿಇಸಿ ತಂಡದ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೊಗದಲ್ಲಿ ಆತಂಕದ ಛಾಯೆ ಮತ್ತು ಒತ್ತಡ ಇರುವುದು ಕಂಡು ಬಂತು.

ಭಾನುವಾರ ನಾಲ್ಕು ಗಂಟೆಗೆ ಹಿರಿಯೂರು ಪ್ರವಾಸಿ ಮಂದಿರಕ್ಕೆ ಆಗಮಿಸಿದ ತಂಡ, ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ಗುಡ್ಡದಲ್ಲಿನ `ಲಕ್ಷ್ಮೀನರಸಿಂಹ ಮೈನ್ಸ್~ಗೆ ಭೇಟಿ ನೀಡಿತು.

ಗುಡ್ಡವನ್ನು ಬಗೆದು ಬಾವಿ ರೀತಿಯಲ್ಲಿ ಬೃಹತ್ ಕಂದಕ ಕೊರೆದಿರುವುದನ್ನು ತಂಡ ಗಮನಿಸಿ ಆಶ್ಚರ್ಯ ವ್ಯಕ್ತಪಡಿಸಿತು. ನಂತರ ಮಾಡದಕೆರೆ ಹೋಬಳಿಯ ದೊಡ್ಡಕಿಟ್ಟದಹಾಳ್‌ನಲ್ಲಿ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಮಾಲೀಕತ್ವದ ಗಣಿಗಾರಿಕೆ ಪ್ರದೇಶವನ್ನು ಪರಿಶೀಲಿಸಿತು.

ಗಣಿ ಪರಿಶೀಲನೆ ಸಂದರ್ಭದಲ್ಲಿ ತಂಡವು ಗಡಿಗಳನ್ನು ಉಲ್ಲಂಘಿಸಿರುವುದು ಮತ್ತು ಗಡಿಗಳಲ್ಲಿ ಕಲ್ಲು ಇಡದಿರುವುದನ್ನು  ಗಮನಿಸಿತು. ಜತೆಗೆ, ಪರಿಸರ ಸಂರಕ್ಷಣಾ ನಿಟ್ಟಿನಲ್ಲಿ ಗಿಡಗಳನ್ನು ನೆಡದಿರುವುದನ್ನು ಪರಿಶೀಲಿಸಿತು.

ಸುಪ್ರೀಂ ಕೋರ್ಟ್‌ನಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಅರ್ಜಿ ಸಲ್ಲಿಸಿ, ಸಿಇಸಿ ಭೇಟಿಗೆ ಕಾರಣರಾದ ಸಮಾಜ ಪರಿವರ್ತನಾ ಸಮುದಾಯ ತಂಡದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಇಸಿ ತಂಡಕ್ಕೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ದಾರಿಯುದ್ದಕ್ಕೂ ಬಿಗಿ ಭದ್ರತೆ ಇತ್ತು. ಸಿಇಸಿ ತಂಡ ಪತ್ರಕರ್ತರಿಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಲಿಲ್ಲ. ಸಿಇಸಿ ತಂಡ ಪರಿಶೀಲಿಸುತ್ತಿದ್ದ ಗಣಿಗಾರಿಕೆ ಸ್ಥಳದ ದೃಶ್ಯವನ್ನು ದೂರದಿಂದಲೇ ಸೆರೆ ಹಿಡಿಯಲು ಅವಕಾಶ ನೀಡಲಾಯಿತು.

ಸೋಮವಾರ ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಗಣಿ ಪ್ರದೇಶಗಳಿಗೆ ಸಿಇಸಿ ತಂಡ ಭೇಟಿ    ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.