ADVERTISEMENT

ಚಿನಕುರಳಿ: ಬಸ್- ಟೆಂಪೊ ಡಿಕ್ಕಿ 9 ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST
ಚಿನಕುರಳಿ: ಬಸ್- ಟೆಂಪೊ ಡಿಕ್ಕಿ 9 ಸಾವು
ಚಿನಕುರಳಿ: ಬಸ್- ಟೆಂಪೊ ಡಿಕ್ಕಿ 9 ಸಾವು   

ಮಂಡ್ಯ: ಪಾಂಡವಪುರ ತಾಲ್ಲೂಕು ಚಿನಕುರಳಿ ಸಮೀಪ ಗುರುವಾರ ಮಧ್ಯಾಹ್ನ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಖಾಸಗಿ ಟೆಂಪೋ (ಮಿನಿ ಬಸ್) ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟು, 51 ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ರಭಸಕ್ಕೆ ಟೆಂಪೊ ಪೂರ್ಣ ನಜ್ಜುಗುಜ್ಜಾಗಿದ್ದು, ಗುರುತಿಸಲಾಗದ ಸ್ಥಿತಿ ತಲುಪಿದೆ. ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, ಇತರ ಐವರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. 13 ಮಂದಿ ಗಂಭೀರ ಗಾಯಗೊಂಡಿದ್ದು, 38 ಮಂದಿಗೆ ಸಣ್ಣಪುಟ್ಟ  ಗಾಯಗಳಾಗಿವೆ.

ಮೃತಪಟ್ಟವರನ್ನು ಮೈಸೂರಿನ ಕೈಲಾಸಪುರಂ ಬಡಾವಣೆಯ ನಿವಾಸಿಗಳಾದ ಚಿಕ್ಕಚೆಲುವಯ್ಯ (52), ಪತ್ನಿ ಪುಟ್ಟಮ್ಮ (50), ಇವರ ಪುತ್ರ ಕುಮಾರ (30), ಮೊಮ್ಮಗ ರೋಹಿತ್ (4), ದೊಡ್ಡ ಚಲುವಯ್ಯ (82), ಅಪ್ಪಸ್ವಾಮಿ (60), ಜ್ಯೋತಿ (40), ವಿಜಯ್‌ಕುಮಾರ್ ಪುತ್ರ ರೋಷನ್ (3) ಮತ್ತು ಟೆಂಪೊ ಚಾಲಕ ದಿಲೀಪ್ (30) ಎಂದು ಗುರುತಿಸಲಾಗಿದೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕುಂದನಹಳ್ಳಿಯಲ್ಲಿ ಶಂಕರ್ ಎಂಬುವವರ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಲು ಟೆಂಪೋದಲ್ಲಿ ತೆರಳುತ್ತಿದ್ದರು. ನಿಶ್ಚಿತಾರ್ಥ ಆಗಬೇಕಾಗಿದ್ದ ಮಧುಮಗ ಶಂಕರ್ ಪ್ರತ್ಯೇಕ ವಾಹನದಲ್ಲಿ ತೆರಳುತ್ತಿದ್ದರು. ದುರಂತದಿಂದ ದಿಗ್ಭ್ರಮೆಗೆ ಒಳಗಾಗಿದ್ದ ಅವರು ಆಸ್ಪತ್ರೆಯ ಆವರಣದಲ್ಲಿ ರೋಧಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ತೀವ್ರವಾಗಿ ಗಾಯಗೊಂಡವರನ್ನು ಮೈಸೂರು ಮತ್ತು ಪಾಂಡವಪುರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಸಣ್ಣಪುಟ್ಟ ಪೆಟ್ಟಾಗಿರುವವರಿಗೆ ಚಿನಕುರಳಿ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಗಾಯಗೊಂಡ ನಂಜುಂಡಸ್ವಾಮಿ, ಮಹದೇವು, ರತ್ನಮ್ಮ, ಪ್ರದೀಪ್, ರಾಜು, ಗೌರಿ, ಸಿದ್ದಮ್ಮ, ಚೈತ್ರಾ, ಶಿವಸ್ವಾಮಿ, ನಾರಾಯಣ, ಅನುಷಾ, ಮಂಜುಳಾ, ಚಂದ್ರೇಗೌಡ, ಶಂಕರ್, ಚನ್ನಪ್ಪ, ಗಂಗಾ ಅವರನ್ನು ಚಿನಕುರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತಪಟ್ಟ ಇಬ್ಬರು ಮಕ್ಕಳು ಶಂಕರನ ಸಹೋದರನ ಪುತ್ರರು ಎಂದು ಹೇಳಲಾಗಿದೆ. ಚಿನಕುರಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.