
ವಿಜಯಪುರ: ‘ಅಪ್ಪನ ಪ್ರೋತ್ಸಾಹ, ಸೋದರ ಮಾವನ ಮಾರ್ಗದರ್ಶನದ ಫಲ ಕನ್ನಡ ಅಧ್ಯಯನ ವಿಭಾಗದಲ್ಲಿ ಮೂರು ಚಿನ್ನದ ಪದಕ. ವಿಶ್ವವಿದ್ಯಾಲಯಕ್ಕೆ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಂಬ ಹೆಮ್ಮೆಯೂ ನನ್ನದಾಗಿದ್ದು, ಈ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸಲ್ಲಬೇಕು.’
ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ‘ಜ್ಞಾನ ಶಕ್ತಿ’ ಆವರಣದಲ್ಲಿ ಶುಕ್ರವಾರ ನಡೆದ ಏಳನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಮೂರು ಚಿನ್ನದ ಪದಕ ಸ್ವೀಕರಿಸಿದ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡ ಗ್ರಾಮದ ರೇಣುಕಾ ರಾಮಗೌಡ ಅವರ ನುಡಿಗಳಿವು.
ಕನ್ನಡ ವಿಷಯದಲ್ಲಿ ಉನ್ನತ ಸಂಶೋಧನೆ ನಡೆಸಿ, ಪಿಎಚ್.ಡಿ ಪದವಿ ಪಡೆದು, ಉಪನ್ಯಾಸಕಿಯಾಗುವ ಕನಸನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.
‘ನಮ್ಮದು ಕೃಷಿ ಆಧಾರಿತ ಕುಟುಂಬ. ಐವರು ಹೆಣ್ಣುಮಕ್ಕಳು ನಾವು. ಇಬ್ಬರು ಸ್ನಾತಕೋತ್ತರ ಪದವೀಧರರು. ಒಬ್ಬಾಕೆ ಎಂಜಿನಿಯರಿಂಗ್ ಓದುತ್ತಿದ್ದಾಳೆ.
ಇನ್ನೊಬಾಕೆ 6ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಒಬ್ಬಳ ಮದುವೆಯಾಗಿದೆ. ಬಿ.ಇಡಿ ಮುಗಿಸಿದಾಗ ನನ್ನ ಸೋದರ ಮಾವ ಉನ್ನತ ಶಿಕ್ಷಣ ಪಡೆಯಲು ಸಲಹೆ ನೀಡಿದ್ದರು. ತಂದೆಯೂ ಓದಿಗೆ ಅಪಾರ ಪ್ರೋತ್ಸಾಹ ನೀಡಿದರು. ಅದರ ಫಲವಾಗಿ ನಾನಿಂದು ವಿ.ವಿ.ಗೆ ಹೆಚ್ಚಿನ ಪದಕ ಪಡೆದ ವಿದ್ಯಾರ್ಥಿನಿ’ ಎಂದು ಹೆಮ್ಮೆಯಿಂದ ಬೀಗಿದರು.
ಯಶೋಗಾಥೆ: ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ, ಛಲದಿಂದ ಓದಿ ಚಿನ್ನದ ಪದಕ ಗಿಟ್ಟಿಸುವ ಮೂಲಕ ಅಪೂರ್ವ ಸಾಧನೆಗೈದ ಕೀರ್ತಿ ತೈರಾಬಿ ಖನದಾಳ ಹಾಗೂ ಪ್ರತಿಭಾ ಚಿಕ್ಕನಳ್ಳಿ ಅವರದ್ದು.
ವಿವಿಧ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಜತೆಗೆ ಕೆಲ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಿಕೊಡುವ ಮೂಲಕ ತಮ್ಮ ಮನೆಯನ್ನು ಮುನ್ನಡೆಸಿದ ತೈರಾಬಿ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹಿರಿಯ ಸೋದರನ ನಿಧನದಿಂದ ಇನ್ನಷ್ಟು ಆಘಾತಕ್ಕೀಡಾದವರು. ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕು ಕಟ್ಟಿಕೊಳ್ಳಲು ಸೆಣಸುತ್ತಿದ್ದು, ರಸಾಯನವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಎಂ.ಎಸ್‌ಸಿ ಪೂರೈಸಿರುವ ತೈರಾಬಿ, ತಮ್ಮ ಸಾಧನೆಯಲ್ಲಿ ತಾಯಿಯ ಪಾತ್ರ ನೆನೆದು ಕಣ್ಣೀರಾದರು.
ಕಣ್ಣೀರಿಟ್ಟ ಪ್ರತಿಭಾ: 9ನೇ ತರಗತಿಯಲ್ಲೇ ತಂದೆಯನ್ನು ಕಳೆದುಕೊಂಡ ಬಸವನ ಬಾಗೇವಾಡಿ ತಾಲ್ಲೂಕು ಹೂವಿನಹಿಪ್ಪರಗಿ ಗ್ರಾಮದ ಪ್ರತಿಭಾ ಚಿಕ್ಕನಳ್ಳಿ ವಾಣಿಜ್ಯ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.
ಪ್ರತಿಭಾ ತಂದೆ ಹೊನ್ನಪ್ಪ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ತಾಯಿ, ಅಣ್ಣ, ಚಿಕ್ಕಪ್ಪ-–ಚಿಕ್ಕಮ್ಮಂದಿರ ನೆರಳಿನಲ್ಲಿ ಬೆಳೆದ ಈಕೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಿದಾಗ, ಕುಟುಂಬದವರ ಕಣ್ಣಂಚಿನಲ್ಲಿ ಆನಂದಬಾಷ್ಪ ತುಂಬಿತ್ತು.
‘ನನ್ನ ತಂದೆ ಈ ಕ್ಷಣದಲ್ಲಿ ಇರಬೇಕಿತ್ತು. ಬಹಳ ಖುಷಿ ಪಡುತ್ತಿದ್ದರು’ ಎಂದು ಪ್ರತಿಭಾ ಕಣ್ಣೀರಿಟ್ಟರು. ‘ಪ್ರತಿಯೊಂದು ಹಂತದಲ್ಲೂ ತಾಯಿ–ಸಹೋದರ ನನಗೆ ಬೆನ್ನೆಲುಬಾಗಿ ನಿಂತರು. ಇವರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.