ADVERTISEMENT

ಚೀನಾ ಭೇಟಿ ಬಳಿಕ ಜಿಲ್ಲಾ ಪ್ರವಾಸ: ಸಿಎಂ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ಮೈಸೂರು: `ಚೀನಾ ಪ್ರವಾಸ ಮುಗಿಸಿದ ಬಳಿಕ ಎಲ್ಲ ಜಿಲ್ಲೆಗಳಿಗೆ ಹೋಗುತ್ತೇನೆ. ಜಗದೀಶ್ ಶೆಟ್ಟರ್ ಅವರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಲಲಿತ ಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ರಾಜ್ಯದ ಜನತೆ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಕೆಲ ಜಿಲ್ಲೆಗಳಿಗೆ ಹೋಗಲು ಸಾಧ್ಯವಾಗಿಲ್ಲ. ಮೈಸೂರು-ಬೆಂಗಳೂರು ಜಿಲ್ಲೆಗಳಿಗೆ ಮಾತ್ರ ನಾನು ಮುಖ್ಯಮಂತ್ರಿ ಅಲ್ಲ ಎಂಬುದು  ಜನತೆಗೆ ಗೊತ್ತಿದೆ' ಎಂದು ಹೇಳಿದರು.
`ಚಾಮರಾಜನಗರ ಜಿಲ್ಲೆಗೆ ಹೋಗಿದ್ದರಿಂದಲೇ ನಾನು ಮುಖ್ಯಮಂತ್ರಿಯಾದೆ. ಚಾಮರಾಜನಗರಕ್ಕೆ ಸಾಕಷ್ಟು ಬಾರಿ ಹೋಗಿದ್ದೇನೆ. ಮುಂದೆಯೂ ಹೋಗುತ್ತೇನೆ.

ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಬಗ್ಗೆ ನನಗೆ ನಂಬಿಕೆ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಚೀನಾದಲ್ಲಿ ಸೆ. 11ರಿಂದ 13ರವರೆಗೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಅದರಲ್ಲಿ ವಿಶ್ವದ ಅನೇಕ ರಾಷ್ಟ್ರಗಳು, ರಾಜ್ಯಗಳು ಭಾಗವಹಿಸುತ್ತಿದ್ದು, ರಾಜ್ಯದಿಂದ ನಾನು ಹೋಗುತ್ತಿದ್ದೇನೆ.

ರಾಜ್ಯದಲ್ಲಿ ಬಂಡವಾಳ ಹೂಡಲು ಹೂಡಿಕೆದಾರರನ್ನು ಆಹ್ವಾನಿಸುತ್ತೇನೆ. ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಬಂಡವಾಳ ಹೂಡುವವರಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ' ಎಂದು ಹೇಳಿದರು.

ಮೈಸೂರು ಪ್ರದಕ್ಷಿಣೆ: `ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿಯನ್ನು ಪರಿಶೀಲಿಸುವ ಸಲುವಾಗಿ ನಗರ ಪ್ರದಕ್ಷಿಣೆ ಮಾಡಲಾಯಿತು. ಮೈಸೂರಿನಲ್ಲೂ ಭೂ ಒತ್ತುವರಿ, ಹಗರಣ ನಡೆದಿದೆ. ಆಗಿನ ಜಿಲ್ಲಾಧಿಕಾರಿ ವಿಜಯಭಾಸ್ಕರ್ ಅವರು ನೀಡಿದ್ದ ವರದಿಯನ್ನು ಹಲವು ವರ್ಷಗಳ ಹಿಂದೆಯೇ ಕೈಬಿಡಲಾಗಿದೆ. ಶೀಘ್ರದಲ್ಲೇ ಮೈಸೂರಿನಲ್ಲೂ ಪ್ರದಕ್ಷಿಣೆ ಮಾಡಲಾಗುವುದು. ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಾಂತರದ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಅವರು   ಉತ್ತರಿಸಿದರು. 

`ಜೆಡಿಎಸ್ ಮತ್ತು ಬಿಜೆಪಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ. ಮೈಸೂರು ಮಹಾನಗರಪಾಲಿಕೆಯ ಅಧಿಕಾರ ಗದ್ದುಗೆ ಹಿಡಿಯುವ ಸಲುವಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುತ್ತಿತ್ತು. ಆದರೆ ಕೋಮುವಾದಿ ಬಿಜೆಪಿ ಮತ್ತು ಜೆಡಿಎಸ್‌ಗೂ ಯಾವುದೇ ವ್ಯತ್ಯಾಸ ಇಲ್ಲ' ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.