ADVERTISEMENT

ಚುನಾವಣೆಗೂ ಮುನ್ನವೇ ಭಗವಾನ್‌ ಹತ್ಯೆಗೆ ಸಂಚು!

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಚುನಾವಣೆಗೂ ಮುನ್ನವೇ ಭಗವಾನ್‌ ಹತ್ಯೆಗೆ ಸಂಚು!
ಚುನಾವಣೆಗೂ ಮುನ್ನವೇ ಭಗವಾನ್‌ ಹತ್ಯೆಗೆ ಸಂಚು!   

ಬೆಂಗಳೂರು:‌ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧವಾಗಿ ಬಂಧಿಸಲಾಗಿರುವ ಆರೋಪಿಗಳು, ವಿಧಾನಸಭಾ ಚುನಾವಣೆಗೂ ಮುನ್ನವೇ ಸಾಹಿತಿ ಪ್ರೊ. ಕೆ.ಎಸ್.ಭಗವಾನ್‌ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಸಂಗತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

‘ಆರೋಪಿಗಳು ಅಕ್ರಮಕೂಟ ರಚಿಸಿಕೊಂಡು ಹಲವು ಸಾಹಿತಿಗಳು ಹಾಗೂ ವಿಮರ್ಶಕರ ಹತ್ಯೆಗೆ ಸಂಚು ರೂಪಿಸಿದ್ದರು. ಆ ಬಗ್ಗೆ ಆಗಾಗ ಪರಸ್ಪರ ಮಾತನಾಡಿಕೊಂಡಿದ್ದರು. ಪ್ರಕರಣದ ಮೊದಲ ಆರೋಪಿ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌ನನ್ನು ಬಂಧಿಸದಿದ್ದರೆ, ಈಗಾಗಲೇ ಭಗವಾನ್‌ ಹತ್ಯೆ ಆಗಿರುತ್ತಿತ್ತು’ ಎಂದು ಎಸ್‌ಐಟಿಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

’ಹತ್ಯೆಗೆಂದು ಮೂರು ತಿಂಗಳ ಕಾರ್ಯಯೋಜನೆಯನ್ನು ಆರೋಪಿಗಳು ಸಿದ್ಧಪಡಿಸಿದ್ದರು. ಭಗವಾನ್ ಅವರನ್ನು ಹಿಂಬಾಲಿಸುವ ಹಾಗೂ ಅವರ ಮನೆ ಸುತ್ತ ನಿಗಾ ಇಡುವ ಕೆಲಸವನ್ನೂ ಆರಂಭಿಸಿದ್ದರು. ನವೀನ್‌ ಬಂಧನವಾಗುತ್ತಿದ್ದಂತೆ, ಎಲ್ಲರೂ ಚದುರಿ ಹೋದರು’ ಎಂದರು.

ADVERTISEMENT

ಶೂಟರ್‌ ಬಗ್ಗೆ ಮುಂದುವರಿದ ತನಿಖೆ: ಗೌರಿ ಅವರ ಮೇಲೆ ಗುಂಡು ಹಾರಿಸಿದ್ದ ಶೂಟರ್ ಯಾರು ಎಂಬುದನ್ನು ತಿಳಿದುಕೊಳ್ಳಲು ಎಸ್‌ಐಟಿ ತನಿಖೆ ಮುಂದುವರಿಸಿದೆ.

‘ಶೂಟರ್‌ ಯಾರೆಂಬುದನ್ನು ತಿಳಿದುಕೊಳ್ಳಲು ಪಿಸ್ತೂಲ್‌ ಸಿಗಬೇಕು. ಬೆರಳಚ್ಚು ಹೊಂದಾಣಿಕೆ ಆಗಬೇಕು. ನಂತರವೇ ಶೂಟರ್‌ ಯಾರು ಎಂಬುದು ಖಚಿತವಾಗುತ್ತದೆ. ಸದ್ಯ ಪರಶುರಾಮ ಅವರೇ ಶೂಟರ್‌ ಇರಬಹುದು ಎಂಬ ಅನುಮಾನವಿದೆ. ಆದರೆ, ಅದು ಖಚಿತವಾಗಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಶೂಟರ್‌ನ್ನು ಸ್ಥಳಕ್ಕೆ ಕರೆತಂದು, ಕೃತ್ಯದ ಬಳಿಕ ವಾಪಸ್‌ ಕರೆದೊಯ್ದ ಬೈಕ್‌ ಸವಾರ ಯಾರು ಎಂಬ ಪ್ರಶ್ನೆ ನಮ್ಮ ಮುಂದಿದೆ. ಈಗಾಗಲೇ ಬಂಧಿಸಲಾಗಿರುವ ಆರೋಪಿಗಳ ಪೈಕಿ, ಯಾರೊಬ್ಬರೂ ಬೈಕ್‌ ಸವಾರರಲ್ಲ ಎಂಬುದು ಖಾತ್ರಿ ಆಗಿದೆ. ಪ್ರಕರಣದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಲ್ಲಿ ಒಬ್ಬ ಬೈಕ್‌ ಸವಾರ ಆಗಿರಲೂಬಹುದು’ ಎಂದು ಮೂಲಗಳು ಹೇಳಿವೆ.

ಪತ್ರಿಕಾಗೋಷ್ಠಿ ಶೀಘ್ರ: ‘ಗೌರಿ ಲಂಕೇಶ್‌ಗೆ ಗುಂಡು ಹೊಡೆದಿದ್ದು ನಾನೇ’ ಎಂದು ಆರೋಪಿ ಪರಶುರಾಮ್‌ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಆದರೆ, ಈ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಖಚಿತಪಡಿಸಿಲ್ಲ.

ಆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ‘ಇದೊಂದು ಗಂಭೀರ ಪ್ರಕರಣ. ತನಿಖೆ ನಡೆಯುತ್ತಿದೆ. ಈಗ ಏನನ್ನೂ ಹೇಳಲಾಗದು. ಸದ್ಯದಲ್ಲೇ ಎಲ್ಲರನ್ನೂ ಕರೆದು (ಪತ್ರಿಕಾಗೋಷ್ಠಿ) ಸ್ಪಷ್ಟ ಮಾಹಿತಿ ನೀಡುತ್ತೇವೆ’ ಎಂದು ಹೇಳಿದರು.

ಜಾಮೀನು ಕೋರಿ ಅರ್ಜಿ: ಪ್ರಕರಣದಡಿ ಬಂಧಿಸಲಾಗಿರುವ ಕೆ.ಟಿ.ನವೀನ್‌ಕುಮಾರ್‌, ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

‘ಮೂರು ಜನರ ಹೇಳಿಕೆ ಮೇರೆಗೆ ನವೀನ್‌ಕುಮಾರ್ ಆರೋಪಿ ಎಂದು ಎಸ್‌ಐಟಿ ಹೇಳಿದೆ. ದೋಷಾರೋಪ ಪಟ್ಟಿಯಲ್ಲಿ ಸಣ್ಣ ಪುರಾವೆಯೂ ಇಲ್ಲ. ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ವಿವರಗಳೇ ಈ ಆರೋಪ ಪಟ್ಟಿಯಲ್ಲಿವೆ. ಹೀಗಾಗಿ, ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದೇವೆ’ ಎಂದು ಆರೋಪಿ ಪರ ವಕೀಲ ವೇದಮೂರ್ತಿ ತಿಳಿಸಿದರು.

‘ನವೀನ್‌ಕುಮಾರ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಯೇ ನಮ್ಮ ವಾದ ಮಂಡಿಸಲಿದ್ದೇವೆ’ ಎಂದರು.

ಆರೋಪಿಗಳ ಕುಟುಂಬಸ್ಥರಿಗೆ ಎಸ್‌ಐಟಿ ಬುಲಾವ್‌

ಬಂಧಿತ ಆರೋಪಿಗಳ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುವುದಕ್ಕಾಗಿ, ಅವರ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆಸಲು ಎಸ್‌ಐಟಿ ಮುಂದಾಗಿದೆ.

ಮಂಗಳವಾರವಷ್ಟೇ ಬಂಧಿಸಲಾಗಿರುವ ಪರಶುರಾಮ ವಾಘ್ಮೋರೆ ಕುಟುಂಬದ ಸದಸ್ಯರಿಗೆ ಸಂದೇಶ ಕಳುಹಿಸಿರುವ ಎಸ್‌ಐಟಿ ಅಧಿಕಾರಿಗಳು, ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ಕುಟುಂಬಸ್ಥರನ್ನು ರಾತ್ರಿಯೇ ಬೆಂಗಳೂರಿನತ್ತ ಕಳುಹಿಸಿಕೊಡುವ ಜವಾಬ್ದಾರಿಯನ್ನು ಸಿಂದಗಿ ಠಾಣೆ ಪೊಲೀಸರಿಗೆ ವಹಿಸಲಾಗಿದೆ.

‘ಆರೋಪಿಗಳು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಘಟನೆ ದಿನದಂದು ಆರೋಪಿಗಳು ಎಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಟುಂಬದವರ ಹೇಳಿಕೆ ಮುಖ್ಯ. ಹೀಗಾಗಿ, ಅವರನ್ನೂ ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

’ಆರೋಪಿಗಳನ್ನು ಮುಗ್ಧರೆಂದು ಅವರು ಕುಟುಂಬಸ್ಥರು ತಿಳಿದುಕೊಂಡಿದ್ದಾರೆ. ಆರೋಪಿಗಳು ಮಾಡಿದ ಕೆಲಸವೇನು ಎಂಬುದನ್ನು ಪುರಾವೆ ಸಮೇತ ತೋರಿಸಲಿದ್ದೇವೆ’ ಎಂದರು.

ಕಾಯಿನ್ ಬೂತ್‌ ನೀಡಿದ ಸುಳಿವು

ಆರೋಪಿಗಳು, ಮೊಬೈಲ್‌ ಬಳಸುತ್ತಿರಲಿಲ್ಲ. ಕಾಯಿನ್ ಬೂತ್‌ ಮೂಲಕವಷ್ಟೇ ಕರೆ ಮಾಡುತ್ತಿದ್ದರು. ಆ ಕಾಯಿನ್‌ ಬೂತ್‌ಗಳಿಂದಲೇ ಆರೋಪಿಗಳ ಸುಳಿವು ಎಸ್‌ಐಟಿಗೆ ಸಿಕ್ಕಿದೆ.

‘ಬಂಧನಕ್ಕೂ ಮುನ್ನ ನವೀನ್‌ ಮೇಲೆ ಕಣ್ಣಿಟ್ಟಿದ್ದೆವು. ಆತನಿಗೆ ಬರುತ್ತಿದ್ದ ಕರೆಗಳನ್ನು ಆಲಿಸಿದೆವು. ಉಳಿದ ಆರೋಪಿಗಳು, ಆತನಿಗೆ ಕಾಯಿನ್‌ ಬೂತ್‌ನಿಂದ ಕರೆ ಮಾಡುತ್ತಿದ್ದರು. ಭೇಟಿಯಾಗುವ ಸ್ಥಳ ಹಾಗೂ ದಿನದ ಬಗ್ಗೆಯಷ್ಟೇ ಮಾತನಾಡುತ್ತಿದ್ದರು. ಅದು ತಿಳಿಯುತ್ತಿದ್ದಂತೆ ನವೀನ್‌ನನ್ನು ಬಂಧಿಸಿದೆವು. ನಂತರ, ಉಳಿದವರು ಸಿಕ್ಕಿಬಿದ್ದರು’ ಎಂದರು.

ಶ್ಲೋಕ ಹೇಳಲು ತಡವರಿಸಿದ ಆರೋಪಿಗಳು

ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

‘ನಾವೆಲ್ಲರೂ ಹಿಂದೂಪರ ಸಂಘಟನೆಯವರು. ಕಿರುಕುಳ ನೀಡಬೇಡಿ ಎಂದು ಆರೋಪಿಗಳು ಪದೇ ಪದೇ ಹೇಳುತ್ತಿದ್ದಾರೆ. ಯಾವುದಾದರೊಂದು ಶ್ಲೋಕ ಹಾಗೂ ಮಂತ್ರ ಹೇಳಿ ಎಂದರೆ ತಡವರಿಸುತ್ತಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಮಹೇಶಚಂದ್ರ ಗುರುಗೆ ಪೊಲೀಸ್ ರಕ್ಷಣೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಬಿ.ಪಿ.ಮಹೇಶಚಂದ್ರ ಗುರು ಅವರಿಗೆ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ನೀಡಲಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ನಂತರ, ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸಾಹಿತಿ ‍ಪ್ರೊ.ಕೆ.ಎಸ್‌.ಭಗವಾನ್‌ ಅವರಿಗೆ ರಕ್ಷಣೆ ನೀಡಲಾಗಿತ್ತು. ಇದೀಗ ಮಹೇಶಚಂದ್ರ ಗುರು ಅವರಿಗೂ ರಕ್ಷಣೆ ಕೊಡಲಾಗಿದೆ. ಭದ್ರತೆಗೆ ಒಬ್ಬ ಗನ್‌ ಮ್ಯಾನ್‌  ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.