ADVERTISEMENT

ಚುನಾವಣೆ: ಮುಂಬಡ್ತಿಗೆ ಹಿಂಬಡ್ತಿ

ಪದೋನ್ನತಿ ಬೇಡ: ಮುಖ್ಯ ಕಾರ್ಯದರ್ಶಿ ಮೌಖಿಕ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 21:06 IST
Last Updated 13 ಏಪ್ರಿಲ್ 2018, 21:06 IST
ಚುನಾವಣೆ: ಮುಂಬಡ್ತಿಗೆ ಹಿಂಬಡ್ತಿ
ಚುನಾವಣೆ: ಮುಂಬಡ್ತಿಗೆ ಹಿಂಬಡ್ತಿ   

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಮುಂಬಡ್ತಿ ಸಿಗಲಿದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯ ಸರ್ಕಾರದ 20,000ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗೆ ಮತ್ತೊಮ್ಮೆ ನಿರಾಸೆಯಾಗುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ, ಇದೇ 16ರೊಳಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ತಯಾರಿಸಿ, ಹಿಂಬಡ್ತಿ–ಮುಂಬಡ್ತಿ ಪ್ರಕ್ರಿಯೆಯನ್ನು ಸರ್ಕಾರ ಪೂರ್ಣಗೊಳಿಸಬೇಕಾಗಿತ್ತು. ಇದು ಜಾರಿಯಾಗಿದ್ದರೆ, ಬಡ್ತಿ ಸಿಗದೇ ಇರುವ ಪರಿಶಿಷ್ಟ ಜಾತಿಯೇತರ ಅಧಿಕಾರಿಗಳಿಗೆ ಮುಂಬಡ್ತಿ ಸಿಗುತ್ತಿತ್ತು. ಚುನಾವಣೆ ಮಗಿಯುವವರೆಗೆ ಇದು ಅನುಷ್ಠಾನವಾಗುವ ಲಕ್ಷಣ ಕಾಣುತ್ತಿಲ್ಲ.

‘ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಈ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಕರ್ತವ್ಯ ನಿರ್ವಹಿಸುವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಈ ವಿವರವನ್ನು ಚುನಾವಣಾ ಆಯೋಗಕ್ಕೂ ಸಲ್ಲಿಸಲಾಗಿದೆ. ಈ ಹೊತ್ತಿನಲ್ಲಿ ಪರಿಶಿಷ್ಟ ಜಾತಿ ನೌಕರರಿಗೆ ಹಿಂಬಡ್ತಿ ನೀಡಿ, ಪರಿಶಿಷ್ಟ ಜಾತಿಯೇತರ ನೌಕರರಿಗೆ ಮುಂಬಡ್ತಿ ನೀಡಿದರೆ ಜವಾಬ್ದಾರಿ ಅದಲು ಬದಲಾಗಲಿದೆ. ಇದು ಚುನಾವಣೆ ಪ್ರಕ್ರಿಯೆ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ, ಚುನಾವಣೆ ಮುಗಿಯುವವರೆಗೆ ಹಿಂಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಸುಪ್ರೀಂಕೋರ್ಟ್ ತೀರ್ಪು ಪಾಲಿಸಲು ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸುವ ಕೆಲಸವನ್ನು ಮಾತ್ರ ಮಾಡಿ. ಯಾವುದೇ ಕಾರಣಕ್ಕೂ ಹಿಂಬಡ್ತಿ ನೀಡುವುದು ಬೇಡ. ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಸರ್ಕಾರದ ಮುಖ್ಯಸ್ಥರು ಹೇಳಿದಂತೆ ನಡೆದುಕೊಳ್ಳೋಣ ಎಂದೂ ರತ್ನಪ್ರಭಾ, ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

**

‍‘ಪರಿಷ್ಕರಿಸಲು ಅವಕಾಶ ಇದೆ’

ಅಧಿಕಾರಿಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಜೇಷ್ಠತಾ ಪಟ್ಟಿಗಳನ್ನು ಪುನಃ ಪರಿಷ್ಕರಿಸಲು ಅವಕಾಶವಿದೆ ಎಂದು ಕೆ.ರತ್ನಪ್ರಭಾ ಸುತ್ತೋಲೆ ಹೊರಡಿಸಿದ್ದಾರೆ.

ಜೇಷ್ಠತಾ ಪಟ್ಟಿಗಳನ್ನು ಒಮ್ಮೆ ಅಂತಿಮಗೊಳಿಸಿದ ಬಳಿಕ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಅಂತಹ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಅವಕಾಶ ಇಲ್ಲ ಎಂಬುದು ಸಾಮಾನ್ಯ ತತ್ವ. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಎನ್‌.ಬಿ. ಮಾರನಬಾಸರಿ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಮೇಲ್ನೋಟಕ್ಕೆ ತಪ್ಪೆಂದು ಕಂಡು ಬರುವ ಪ್ರಕರಣಗಳಲ್ಲಿ ಅಂತಹ ತಪ್ಪುಗಳನ್ನು ಪರಿಷ್ಕರಿಸಲು ಅವಕಾಶ ಇದೆ ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ. ಸಂಬಂಧಿಸಿದ ಇಲಾಖೆಗಳು ಪಟ್ಟಿಗಳನ್ನು ಪರಿಷ್ಕರಿಸಬಹುದು ಎಂದೂ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.