ADVERTISEMENT

ಜನಪ್ರತಿನಿಧಿಗಳಿಗೆ ವಿಶೇಷ ಕೋರ್ಟ್‌ ಶುರು

137 ಪ್ರಕರಣ ಇತ್ಯರ್ಥಗೊಳಿಸಲು ಒಂದು ವರ್ಷದ ಗಡುವು

ಸುಚೇತನಾ ನಾಯ್ಕ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಜನಪ್ರತಿನಿಧಿಗಳಿಗೆ ವಿಶೇಷ ಕೋರ್ಟ್‌ ಶುರು
ಜನಪ್ರತಿನಿಧಿಗಳಿಗೆ ವಿಶೇಷ ಕೋರ್ಟ್‌ ಶುರು   

ಬೆಂಗಳೂರು: ಕರ್ನಾಟಕದ ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್‌ ಸ್ಥಾಪನೆಗೊಂಡಿದ್ದು, ಅದೀಗ ಕಾರ್ಯ ಆರಂಭಿಸಿದೆ.

ಆರೋಪಿ ಜನಪ್ರತಿನಿಧಿಗಳ ವಿಚಾರಣೆಗೆ ದೇಶದಲ್ಲಿ ಒಟ್ಟು 12 ವಿಶೇಷ ಕೋರ್ಟ್ ಸ್ಥಾಪಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ನಿರ್ದೇಶಿಸಿತ್ತು. ಕ್ರಿಮಿನಲ್‌ ಹಿನ್ನೆಲೆಯುಳ್ಳವರನ್ನು ರಾಜಕೀಯದಿಂದ ಶಾಶ್ವತವಾಗಿ ನಿಷೇಧಿಸುವಂತೆ ಕೋರಿ ಅಶ್ವಿನ್‌ ಕುಮಾರ್‌ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ಹೊರಡಿಸಿತ್ತು.

ದೆಹಲಿಯಲ್ಲಿ 228 ಸಂಸದರ ಕೇಸುಗಳು ಇರುವ ಕಾರಣ, ಅಲ್ಲಿ ಎರಡು ವಿಶೇಷ ಕೋರ್ಟ್‌ ಹಾಗೂ ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ತಲಾ ಒಂದು ಕೋರ್ಟ್‌ ಸ್ಥಾಪಿಸುವಂತೆ ಕೋರ್ಟ್‌ ಹೇಳಿತ್ತು.

ADVERTISEMENT

ಈ ನಿರ್ದೇಶನದ ಮೇರೆಗೆ, ನಗರದ ಸಿವಿಲ್‌ ಕೋರ್ಟ್‌ನಲ್ಲಿ ಇದೇ ಮಾರ್ಚ್‌ 1ರಿಂದ ಕೋರ್ಟ್‌ ಸ್ಥಾಪನೆಗೊಂಡು ಕಾರ್ಯ ಆರಂಭಿಸಿದೆ. ಹಿರಿಯ ಜಿಲ್ಲಾ ನ್ಯಾಯಾಧೀಶ ಬಿ.ವಿ.ಪಾಟೀಲ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. 82 ಜನಪ್ರತಿನಿಧಿಗಳ ವಿರುದ್ಧ ಒಟ್ಟು 137 ಕ್ರಿಮಿನಲ್‌ ಪ್ರಕರಣಗಳು ರಾಜ್ಯದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ಅಷ್ಟೂ ಪ್ರಕರಣಗಳನ್ನು ಈ ವಿಶೇಷ ಕೋರ್ಟ್‌ಗೆ ಈಗಾಗಲೇ ವರ್ಗಾಯಿಸಲಾಗಿದೆ.

ಶೀಘ್ರಲಿಪಿಕಾರರು ಸೇರಿದಂತೆ ಒಟ್ಟು 13 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಒಂದು ವರ್ಷದ ಒಳಗೆ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ. ಆದ್ದರಿಂದ ಇಲ್ಲಿ ನೇಮಕಗೊಂಡಿರುವ ಸಿಬ್ಬಂದಿಯ ಸೇವೆಯನ್ನು ಒಂದು ವರ್ಷದ ಬಳಿಕ ಹೊರಗುತ್ತಿಗೆ ಮೂಲಕ ಮುಂದುವರಿಸಬೇಕು ಎಂದು ಸರ್ಕಾರ ಹೇಳಿದೆ.

ದೇಶದಲ್ಲಿರುವ ಆರೋಪಿ ಜನಪ್ರತಿನಿಧಿಗಳ ಬಗ್ಗೆ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌’ ಸ್ವಯಂ ಸೇವಾ ಸಂಸ್ಥೆ ನೀಡಿದ್ದ ಅಂಕಿಅಂಶಗಳ ಬಗ್ಗೆ ಸುಪ್ರೀಂಕೋರ್ಟ್‌ಗೆ ಅರ್ಜಿದಾರರು ಮಾಹಿತಿ ನೀಡಿದ್ದರು. 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಅರ್ಜಿಯಲ್ಲಿ ನಮೂದಿಸಿರುವ ಅಂಶಗಳನ್ನು ಪರಿಗಣಿಸಿ ಸಂಸ್ಥೆ ಅಂಕಿಅಂಶ ನೀಡಿತ್ತು. ಅದರಲ್ಲಿ 1,581 ಪ್ರಕರಣಗಳ ಬಗ್ಗೆ ಉಲ್ಲೇಖವಿತ್ತು (ಈ ಪೈಕಿ ಮಹಿಳೆಯರ ಮಾನಭಂಗ, ಅತ್ಯಾಚಾರ, ಅಪಹರಣ, ಕೊಲೆ... ಹೀಗೆ ಅತ್ಯಂತ ಕ್ರೂರ ಪ್ರಕರಣಗಳ ಆರೋಪಿಗಳ ಸಂಖ್ಯೆ 51 ಇರುವುದಾಗಿ ಸಂಸ್ಥೆ ಹೇಳಿತ್ತು). ಇದರ ಆಧಾರದ ಮೇಲೆ ವಿಶೇಷ ಕೋರ್ಟ್‌ ಸ್ಥಾಪಿಸುವಂತೆ ಕೋರ್ಟ್‌ ನಿರ್ದೇಶಿಸಿತ್ತು. ಈ ವೇಳೆ, ಸರಿಯಾದ ಅಂಕಿಅಂಶ ನೀಡಲು ಕೇಂದ್ರಕ್ಕೆ ಎರಡು ತಿಂಗಳು ಗಡುವು ನೀಡಿತ್ತು.

ಈ ಆದೇಶದಂತೆ ಕೇಂದ್ರ ಸರ್ಕಾರವು, 2014-2017ರವರೆಗೆ ದೇಶದ ವಿವಿಧ ಕೋರ್ಟ್‌ಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಇತ್ಯರ್ಥಕ್ಕೆ ಬಾಕಿ ಇರುವ ಅಂಕಿಅಂಶವನ್ನು ಕಲೆ ಹಾಕಿದೆ. ಈ ಸಂಖ್ಯೆಯು ಸಂಸ್ಥೆ ನೀಡಿರುವ ಅಂಕಿಅಂಶದ ಎರಡು ಪಟ್ಟು ಹೆಚ್ಚಾಗಿದೆ. ಈ ಅಂಕಿಅಂಶವುಳ್ಳ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿದ್ದು, ಇದರ ಆಧಾರದ ಮೇಲೆ ಕೋರ್ಟ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕೇ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಕೋರ್ಟ್‌ ನಿರ್ಧರಿಸಲಿದೆ.
**
ದೇಶದಲ್ಲಿ ಶೇ 36ರಷ್ಟು ಆರೋಪಿಗಳು
ದೇಶದಲ್ಲಿ ಇರುವ ಸಂಸದರ ಸಂಖ್ಯೆ 776 ಹಾಗೂ ಶಾಸಕರ ಸಂಖ್ಯೆ 4,120 (ಒಟ್ಟೂ 4,896). ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ನೀಡಿರುವ ಅಂಕಿಅಂಶಗಳ ಪ್ರಕಾರ, 1,765 ಮಂದಿ ಅಂದರೆ ಶೇ 36ರಷ್ಟು ಮಂದಿ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಾರೆ. ಇಷ್ಟು ಮಂದಿ ವಿರುದ್ಧ 3,045 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.