ADVERTISEMENT

ಜನ ಒಪ್ಪಿದ ಯೋಜನೆ ಟೀಕೆ ಸಲ್ಲದು: ಸಿ.ಎಂ

ಅನ್ನ ಭಾಗ್ಯ: ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರದ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2015, 19:30 IST
Last Updated 16 ಜೂನ್ 2015, 19:30 IST
ಕೃಷಿ ಯಂತ್ರಧಾರೆ ಯೋಜನೆಯಡಿ ನೀಡುವ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸಂಶಿಯಲ್ಲಿ ಸೋಮವಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರ್ಯಾಕ್ಟರ್‌ ಮೇಲೆ ಕುಳಿತು ನಗೆ ಬೀರಿದ ಕ್ಷಣ. ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಸಿ.ಎಸ್.ಶಿವಳ್ಳಿ, ಬಸವರಾಜ ಹೊರಟ್ಟಿ, ಸಚಿವರಾದ ದಿನೇಶ ಗುಂಡೂರಾವ್‌, ಕೃಷ್ಣ ಬೈರೇಗೌಡ ಹಾಗೂ ಶಾಸಕ ವಿನಯ ಕುಲಕರ್ಣಿ ಇದ್ದಾರೆ. ಪ್ರಜಾವಾಣಿ ಚಿತ್ರ
ಕೃಷಿ ಯಂತ್ರಧಾರೆ ಯೋಜನೆಯಡಿ ನೀಡುವ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸಂಶಿಯಲ್ಲಿ ಸೋಮವಾರ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ರ್ಯಾಕ್ಟರ್‌ ಮೇಲೆ ಕುಳಿತು ನಗೆ ಬೀರಿದ ಕ್ಷಣ. ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಸಿ.ಎಸ್.ಶಿವಳ್ಳಿ, ಬಸವರಾಜ ಹೊರಟ್ಟಿ, ಸಚಿವರಾದ ದಿನೇಶ ಗುಂಡೂರಾವ್‌, ಕೃಷ್ಣ ಬೈರೇಗೌಡ ಹಾಗೂ ಶಾಸಕ ವಿನಯ ಕುಲಕರ್ಣಿ ಇದ್ದಾರೆ. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹಸಿದವರಿಗೆ ಅನ್ನ ಕೊಡು ವುದು ತಪ್ಪಲ್ಲ’ ಎಂದು ಹೇಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.

ಕುಂದಗೋಳ ತಾಲ್ಲೂಕಿನ ಹೊಸಳ್ಳಿಯಲ್ಲಿ ಕೃಷಿ ಭಾಗ್ಯ ಹಾಗೂ ಕೃಷಿ ಯಂತ್ರಧಾರೆ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಂಶಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಜಾರಿಗೆ ತಂದಿರುವ ‘ಅನ್ನಭಾಗ್ಯ’ದಂತಹ ಯೋಜನೆಗಳು ಜನರ ಉದ್ಧಾರಕ್ಕೆ ಅಲ್ಲ’ ಎಂದು ಸಾಹಿತಿ  ದೇ. ಜವರೇಗೌಡ ಅವರು ಸೋಮವಾರ ದಾವಣಗೆರೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.

‘ಅನ್ನಭಾಗ್ಯ ಯೋಜನೆ ಸರಿ ಎನ್ನುವವರು ಕೈ ಎತ್ತಿ’ ಎಂದು ಅವರು ಜನರಿಗೆ ಹೇಳಿದಾಗ, ಸಭಾಂಗಣದಲ್ಲಿದ್ದ ಸುಮಾರು ಮೂರು ಸಾವಿರ ಮಂದಿ ಕೈ ಎತ್ತಿದರು. ಇದನ್ನು ಗಮನಿಸಿದ ಅವರು ‘ಜನರು ಒಪ್ಪಿಕೊಂಡ ಯೋಜನೆಗಳನ್ನು ಟೀಕಿಸುವುದು ಸರಿಯಲ್ಲ. ಜನರನ್ನು ಸೋಮಾರಿಗಳನ್ನಾಗಿಸುವುದಕ್ಕಾಗಿ ಅಲ್ಲ; ಅವರಿಗೆ ಎರಡು ಹೊತ್ತು ಅನ್ನ ಕೊಡು ವುದಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.

‘ಅನ್ನಭಾಗ್ಯ ಯೋಜನೆಯಿಂದ ರೈತರಿಗೆ ಅನುಕೂಲವೂ ಆಗಿದೆ. ಅವರು ಬೆಳೆದ ಅಕ್ಕಿ, ಜೋಳ, ರಾಗಿ ಇತ್ಯಾದಿಗಳನ್ನು ಸರ್ಕಾರ ಖರೀದಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ. ಶಾಲೆಗಳಲ್ಲಿ ಹಾಜರಾತಿ ಹೆಚ್ಚುತ್ತಿದೆ’ ಎಂದರು.

ಟೀಕೆ ಸರಿಯಲ್ಲ (ವಿಜಯಪುರ ವರದಿ): ಇಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ‘ಅನ್ನ ಭಾಗ್ಯ ಯೋಜನೆ ಕುರಿತು ಟೀಕೆ ಮಾಡುವುದು ಸರಿಯಲ್ಲ’ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು. ‘ಬಡವರಿಗೆ ಸಹಾಯ ಮಾಡುವುದು ತಪ್ಪಾ? ಉಚಿತ ವಾಗಿ ಅಕ್ಕಿ ಕೊಟ್ಟರೆ ಯಾರೂ ಸೋಮಾರಿ ಗಳಾಗುವುದಿಲ್ಲ. ಉಳಿದ ಅವಶ್ಯಕತೆಗಳಿಗೆ ಎಲ್ಲರೂ ದುಡಿಯುತ್ತಾರೆ. ಈ ಕುರಿತು ಟೀಕೆ ಸರಿಯಲ್ಲ’ ಎಂದರು.

ಕೇಂದ್ರದ ಓಲೈಕೆಗೆ  ಟೀಕೆ (ಮಂಡ್ಯ ವರದಿ):  ಕೇಂದ್ರ ಸರ್ಕಾರದ ಓಲೈಕೆಗಾಗಿ ಕೆಲ ಸಾಹಿತಿಗಳು ‘ಅನ್ನಭಾಗ್ಯ’ ಯೋಜನೆಯನ್ನು ಟೀಕಿಸುತ್ತಿದ್ದಾರೆ ಎಂದು ಕವಿ ನಾಗತಿಹಳ್ಳಿ ರಮೇಶ್‌ ಇಲ್ಲಿ ಟೀಕಿಸಿದರು.

‘ಶೂದ್ರರ ಮನೆಯಲ್ಲಿ ವಾರಾನ್ನ ತಿಂದು ಬೆಳೆದವರು. ಈಗ ‘ಅನ್ನಭಾಗ್ಯ’ದ ಬಗ್ಗೆ ಟೀಕೆ ಮಾತನಾಡುತ್ತಿದ್ದಾರೆ. ಇದು ಸರಿಯಲ. ಬಡವರ ಹಸಿವಿನ ಬಗ್ಗೆ ಬರೆದಿರುವ ಕುಂ. ವೀರಭದ್ರಪ್ಪ ಅವರು, ಜ್ಞಾನಪೀಠ ಪ್ರಶಸ್ತಿಗಾಗಿ ‘ಅನ್ನಭಾಗ್ಯ’ ಯೋಜನೆ ಟೀಕಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.