ADVERTISEMENT

ಜಮೀನು ವಂಚನೆ ಆರೋಪ

ಉಪಮುಖ್ಯಮಂತ್ರಿ ಈಶ್ವರಪ್ಪಗೆ ಮತ್ತೊಂದು ಕಂಟಕ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:43 IST
Last Updated 26 ಡಿಸೆಂಬರ್ 2012, 19:43 IST

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರನ್ನು, ಕಡಿಮೆ ಮೊತ್ತ ನಮೂದಿಸಿ ಜಮೀನು ಖರೀದಿಸಿ ವಂಚಿಸಿರುವ ಆಪಾದನೆಯೂ ಸುತ್ತಿಕೊಂಡಿದೆ. ಸೋಮವಾರ ಲೋಕಾಯುಕ್ತ ಪೊಲೀಸರು ಅವರ ಮನೆಯ ಮೇಲೆ ದಾಳಿ ನಡೆಸಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.

ಶಿವಮೊಗ್ಗದ ಮಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ಈಶ್ವರಪ್ಪ ಕುಟುಂಬದ ಸದಸ್ಯರು ಜಮೀನು ಖರೀದಿ ವೇಳೆ ಕಡಿಮೆ ದರ ನಮೂದಿಸಿ ನೋಂದಣಿ ಮಾಡಲಾಗಿದೆ. ಆ ಜಮೀನಿನ ಕ್ರಯಪತ್ರದ ನೋಂದಣಿಯಲ್ಲಿ ನಮೂದಿಸಿರುವ ಮೊತ್ತ ಹಾಗೂ ಅದರ ನೈಜ ಮಾರುಕಟ್ಟೆ ದರದ ನಡುವೆ 20 ಪಟ್ಟುನಷ್ಟು ಹೆಚ್ಚು ವ್ಯತ್ಯಾಸ ಇರುವುದನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪತ್ತೆ ಮಾಡಿತ್ತು. ಕಡಿಮೆ ಮೊತ್ತ ನಮೂದಿಸಿ ವಂಚಿಸಿರುವ ಕುರಿತು ಜಿಲ್ಲಾ ನೋಂದಣಾಧಿಕಾರಿ ಈಶ್ವರಪ್ಪ ಕುಟುಂಬಕ್ಕೆ ನೀಡಿದ್ದ ನೋಟಿಸ್ ಬೆಂಗಳೂರಿನ ಚಕ್ರವರ್ತಿ ಬಡಾವಣೆಯಲ್ಲಿರುವ ಈಶ್ವರಪ್ಪ ಮನೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೊರೆತಿದೆ.

`ಈಶ್ವರಪ್ಪ ಕುಟುಂಬ ಮಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ಖರೀದಿಸಿರುವ ಜಮೀನಿನ ಕ್ರಯ ಪತ್ರದಲ್ಲಿ ಆಸ್ತಿಯ ಮೌಲ್ಯವನ್ನು ರೂ 55 ಲಕ್ಷ  ಎಂದು ನಮೂದಿಸಲಾಗಿತ್ತು.

ಆದರೆ, ಖರೀದಿ ಸಂದರ್ಭದಲ್ಲಿ ಆ ಜಮೀನಿನ ನೈಜ ಮಾರುಕಟ್ಟೆ ದರ  ರೂ 12 ಕೋಟಿಗೂ ಹೆಚ್ಚು ಇತ್ತು ಎಂಬುದನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪತ್ತೆ ಮಾಡಿತ್ತು. ಆಸ್ತಿ ಖರೀದಿಯಲ್ಲಿ ಅಕ್ರಮ ನಡೆದಿರುವ ವಿಷಯ ಶಿವಮೊಗ್ಗ ಜಿಲ್ಲಾ ನೋಂದಣಿ ಅಧಿಕಾರಿ ಜಾರಿ ಮಾಡಿರುವ ನೋಟಿಸ್‌ನಲ್ಲಿದೆ' ಎಂದು ಲೋಕಾಯುಕ್ತದ ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಈ ಪ್ರದೇಶದಲ್ಲಿ ಈಶ್ವರಪ್ಪ ಕುಟುಂಬ ಜಮೀನು ಖರೀದಿಸಿದ ಸಂದರ್ಭದಲ್ಲೇ ಅಲ್ಲಿಯೇ ನಡೆದ ಇತರೆ ಭೂ ವ್ಯವಹಾರಗಳನ್ನೂ ಜಿಲ್ಲಾ ನೋಂದಣಿ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ನೋಂದಣಿ ದಾಖಲೆಗಳ ಪ್ರಕಾರವೇ ಈ ಜಮೀನಿನ ಮೌಲ್ಯಮಾಪನ ನಡೆಸಿದ್ದು, ಅದರ ಮಾರುಕಟ್ಟೆ ದರ ರೂ 12 ಕೋಟಿಗೂ ಹೆಚ್ಚಾಗಿತ್ತು ಎಂಬುದು ಪರಿಶೀಲನೆಯಲ್ಲಿ ದೃಢಪಟ್ಟಿತ್ತು. ಆಸ್ತಿ ನೋಂದಣಿಯಲ್ಲಿ ಅಕ್ರಮ ನಡೆದಿರುವುದು ಖಚಿತವಾದ ಬಳಿಕವೇ ಜಿಲ್ಲಾ ನೋಂದಣಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದರು.

ವಂಚನೆ ಬಗ್ಗೆಯೂ ತನಿಖೆ?: ಶಿವಮೊಗ್ಗದ ವಕೀಲ ಬಿ.ವಿನೋದ್ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪಗಳ ಕುರಿತು ತನಿಖೆಗೆ ಆದೇಶಿಸಿತ್ತು. ಈ ಪ್ರಕರಣದ ತನಿಖೆಗಾಗಿ ಶಿವಮೊಗ್ಗ ಮತ್ತು ಬೆಂಗಳೂರಿನ ಒಂಬತ್ತು ಕಡೆಗಳಲ್ಲಿ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಶೋಧ ಕಾರ್ಯ ನಡೆಸಿದ್ದರು. ಜಮೀನು ಖರೀದಿಯಲ್ಲಿ ಅಕ್ರಮ ನಡೆದಿರುವುದನ್ನು ಖಚಿತಪಡಿಸಬಲ್ಲ ದಾಖಲೆಗಳು ದಾಳಿಯ ವೇಳೆ ಪತ್ತೆಯಾಗಿರುವುದರಿಂದ ಈ ಬಗ್ಗೆಯೂ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

`ಶೋಧದ ವೇಳೆ ಪತ್ತೆಯಾದ ದಾಖಲೆಗಳ ಸಮಗ್ರ ಮಾಹಿತಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಜಮೀನು ಖರೀದಿಯಲ್ಲಿ ವಂಚನೆ ನಡೆದಿರುವ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು. ನ್ಯಾಯಾಲಯ ಒಪ್ಪಿಗೆ ನೀಡಿದಲ್ಲಿ ಈ ಬಗ್ಗೆ ತನಿಖೆ ಮುಂದುವರಿಸಲಾಗುವುದು' ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
28 ಆಸ್ತಿ ಪತ್ತೆ: ಈಶ್ವರಪ್ಪ ಅವರು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 2006ರ ಫೆಬ್ರುವರಿಯಿಂದ 2007ರ ಅಕ್ಟೋಬರ್‌ವರೆಗೆ ಜಲಸಂಪನ್ಮೂಲ ಸಚಿವರಾಗಿದ್ದರು.

ನಂತರ ಬಂದ ಬಿಜೆಪಿ ಸರ್ಕಾರದಲ್ಲಿ 2008ರ ಜುಲೈನಿಂದ 2010ರ ಜನವರಿವರೆಗೆ ಇಂಧನ ಸಚಿವರಾಗಿದ್ದರು. ಈ ವರ್ಷದ ಜುಲೈ ತಿಂಗಳಿನಿಂದ ಉಪ ಮುಖ್ಯಮಂತ್ರಿಯಾಗಿದ್ದು, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರಾಗಿದ್ದಾರೆ. 2006ರಲ್ಲಿ ಸಚಿವರಾದ ದಿನದಿಂದ ಈಶ್ವರಪ್ಪ, ಅವರ ಪುತ್ರ ಕೆ.ಇ.ಕಾಂತೇಶ್ ಮತ್ತು ಸೊಸೆ ಆರ್.ಶಾಲಿನಿ ಶಿವಮೊಗ್ಗದ ಬಿ.ಎಚ್.ರಸ್ತೆ, ಸವಳಂಗ ರಸ್ತೆಯ ಚನ್ನಪ್ಪ ಬಡಾವಣೆ ಮತ್ತು ತ್ಯಾವರೆಚಟ್ನಹಳ್ಳಿಯಲ್ಲಿ 25 ಆಸ್ತಿಗಳನ್ನು ಖರೀದಿಸಿದ್ದರು ಎಂದು ವಿನೋದ್ ದೂರಿನಲ್ಲಿ ಆರೋಪಿಸಿದ್ದರು. ಆದರೆ, ದಾಳಿಯ ವೇಳೆ 28 ಆಸ್ತಿಗಳ ಖರೀದಿಗೆ ಸಂಬಂಧಿಸಿದ ಕ್ರಯಪತ್ರಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ ಎಂದು ಗೊತ್ತಾಗಿದೆ.

ನೋಟು ಎಣಿಕೆ ಯಂತ್ರ
ಈಶ್ವರಪ್ಪ ಅವರ ಬೆಂಗಳೂರು ನಿವಾಸದಲ್ಲಿ ನೋಟು ಎಣಿಕೆ ಯಂತ್ರವೊಂದು ಪತ್ತೆಯಾಗಿದೆ. ಅದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ನೋಟು ಎಣಿಕೆ ಯಂತ್ರದ ಖರೀದಿ ಸಮಯ, ಅದನ್ನು ಯಾವ ಉದ್ದೇಶಕ್ಕೆ ತರಲಾಗಿತ್ತು ಮತ್ತಿತರ ಅಂಶಗಳ ಕುರಿತು ಈಶ್ವರಪ್ಪ ಹಾಗೂ ಅವರ ಪುತ್ರನನ್ನು ಪ್ರಶ್ನಿಸಲು ತನಿಖಾ ತಂಡ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.