ADVERTISEMENT

ಜಲ ನಿರ್ವಹಣೆಯಲ್ಲಿ ಮಹಾರಾಷ್ಟ್ರ ಮಾದರಿ

ಅಲ್ಲಲ್ಲಿ ನಿರ್ಮಿಸಿರುವ ಚಿಕ್ಕ ಚಿಕ್ಕ ಬ್ಯಾರೇಜ್‌ಗಳೇ ಆಸರೆ, ನೀರು ನಿರ್ವಹಣಾ ಸಮಿತಿ ಸಕ್ರಿಯ

ಡಿ.ಬಿ, ನಾಗರಾಜ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಮಹಾರಾಷ್ಟ್ರದ ಕೊಯ್ನಾ ಜಲಾಶಯ (ಸಂಗ್ರಹ ಚಿತ್ರ)
ಮಹಾರಾಷ್ಟ್ರದ ಕೊಯ್ನಾ ಜಲಾಶಯ (ಸಂಗ್ರಹ ಚಿತ್ರ)   

ವಿಜಯಪುರ: ಮುಂಗಾರು ಮಳೆ ಆರಂಭವಾಗುವ ತನಕ ಅಗತ್ಯವಿರುವಷ್ಟು ನೀರನ್ನು ಕೃಷ್ಣಾ ಕೊಳ್ಳದ ಜಲಾಶಯಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಮಹಾರಾಷ್ಟ್ರ, ನೀರು ನಿರ್ವಹಣೆ ವಿಷಯದಲ್ಲಿ ಮಾದರಿಯಾಗಿದೆ.

ನೀರಾವರಿ ಉದ್ದೇಶಕ್ಕೆ ಹಾಗೂ ಕಾರ್ಖಾನೆಗಳಿಗೆ ಮಳೆಗಾಲದಲ್ಲಿ ಮಾತ್ರ ನೀರು ಹರಿಸಿ, ಆ ನೀರನ್ನು ಮುಂದಿನ ಮಳೆಗಾಲದವರೆಗೆ ರಕ್ಷಿಸಿಟ್ಟುಕೊಳ್ಳುವ ಹೊಣೆಯನ್ನೂ ಹೊರಿಸುವುದರಿಂದ ನೀರು ನಿರ್ವಹಣೆಯಲ್ಲಿ ಅಲ್ಲಿ ಅಚ್ಚುಕಟ್ಟುತನ ಕಾಣುತ್ತದೆ.

ಇದರಿಂದಾಗಿ ನದಿ ಪಾತ್ರದ ಅಲ್ಲಿನ ಜನ ಕಡು ಬೇಸಿಗೆಯಲ್ಲೂ ನೀರಿಗಾಗಿ ಪರದಾಡುವುದಿಲ್ಲ. ಇದರ ಜೊತೆಗೆ ಕರ್ನಾಟಕದಿಂದ ಬೇಡಿಕೆ ಬಂದಾಗಲೆಲ್ಲ ನೀರನ್ನೂ ಬಿಡುಗಡೆ ಮಾಡುತ್ತದೆ.

ADVERTISEMENT

ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಹಣ ಪಡೆದು ನೀರನ್ನು ಬಿಡುತ್ತಿತ್ತು. ಆದರೆ ಇದೀಗ, ತಾನೆಷ್ಟು ಪ್ರಮಾಣದಲ್ಲಿ ನೀರು ಬಿಡುತ್ತದೆಯೋ ಅಷ್ಟೇ ನೀರನ್ನು ತಾನು ಕೇಳಿದಾಗ ನೀಡಬೇಕು ಎಂಬ ಕರಾರಿನೊಂದಿಗೆ 7 ಟಿಎಂಸಿ ಅಡಿ ನೀರು ನೀಡಿದೆ. ಕರಾರಿನ ಪ್ರಕಾರ, ಮಹಾರಾಷ್ಟ್ರ ಕೇಳಿದಾಗ ಆ ನೀರನ್ನು ಇಂಡಿ ಉಪ ಕಾಲುವೆ ಮೂಲಕ ಸೊಲ್ಲಾಪುರ ಭಾಗಕ್ಕೆ ಪೂರೈಸಬೇಕಿದೆ.

ಮಾದರಿ ನಿರ್ವಹಣೆ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಬ್ಯಾರೇಜ್‌, ಜಲಾಶಯಗಳಿವೆ. ನದಿ–ಉಪ ನದಿಗಳ ಹರಿವಿನುದ್ದಕ್ಕೂ ಪ್ರತಿ 10 ಕಿ.ಮೀ.ಗೆ ಒಂದರಂತೆ ಬ್ಯಾರೇಜ್‌ ನಿರ್ಮಿಸಲಾಗಿದೆ. ಇವು ಬೇಸಿಗೆಯಲ್ಲೂ ಅಗತ್ಯವಿರುವಷ್ಟು ನೀರನ್ನು ಶೇಖರಿಸಿಟ್ಟುಕೊಂಡಿವೆ. ನೀರಾವರಿ ಕ್ಷೇತ್ರದ ಉಸ್ತುವಾರಿ ವ್ಯವಸ್ಥೆಯೂ ಅತ್ಯುತ್ತಮವಾಗಿದೆ ಎನ್ನುತ್ತಾರೆ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ.

ನೀರು ಬಳಕೆದಾರರ ಸಂಘಕ್ಕೆ ಪ್ರಾಮುಖ್ಯ: ನೀರಾವರಿಗೆ, ಕೈಗಾರಿಕೆಗೆ ಅಗತ್ಯವಿರುವಷ್ಟು ನೀರನ್ನು ಮಳೆಗಾಲದಲ್ಲೇ ಪೂರೈಸಿಬಿಡಲಾಗುತ್ತದೆ. ಮತ್ತೆ ಮುಂಗಾರು ಮಳೆ ಆರಂಭಗೊಳ್ಳುವ ತನಕವೂ ಅಲ್ಲಿಗೆ ನೀರು ಹೋಗದು. ಈ ವೇಳೆಯಲ್ಲಿ ಜಲಾಶಯ, ಬ್ಯಾರೇಜ್‌ನಿಂದ ನೀರು ಬರಿದಾಗದಂತೆ ಅಲ್ಲಿನ ಜಲಸಂಪನ್ಮೂಲ ಇಲಾಖೆ ಮುನ್ನೆಚ್ಚರಿಕೆ ವಹಿಸಿರುತ್ತದೆ. ನೀರು ಬಳಕೆದಾರರ ಸಂಘಗಳು ಕಾಲುವೆ ಮತ್ತು ನೀರಿನ ನಿರ್ವಹಣೆ ಮಾಡುತ್ತವೆ. ನೀರು ಬಳಕೆದಾರರ ಸಂಘಗಳ ಮಹಾ ಒಕ್ಕೂಟವೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ ಅವರು.

ಮಳೆಗಾಲದಲ್ಲಷ್ಟೇ ನೀರು: ‘ಕೃಷ್ಣಾ ಕೊಳ್ಳದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚು. ಇಲ್ಲಿರುವ ಕೈಗಾರಿಕೆಗಳಿಗೂ ಬೇಸಿಗೆಯಲ್ಲಿ ನೀರು ಪೂರೈಸುವುದಿಲ್ಲ. ಮಳೆಗಾಲದಲ್ಲಿ ನದಿಯಲ್ಲಿ ಮಹಾಪೂರ ಬಂದಾಗಲಷ್ಟೇ ಜಲಸಂಪನ್ಮೂಲ ಇಲಾಖೆ ನೀರು ಪೂರೈಸುತ್ತದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಜವಾಬ್ದಾರಿ ಕಾರ್ಖಾನೆಗಳದ್ದು’ ಎಂದು ಮಹಾರಾಷ್ಟ್ರದಲ್ಲಿನ ನೀರು ನಿರ್ವಹಣೆ ಕುರಿತು ಕುಂಬಾರ ಮಾಹಿತಿ ನೀಡಿದರು.

‘ಸ್ವಾತಂತ್ರ್ಯ ಪೂರ್ವದಿಂದಲೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನೀರಾವರಿ ಇದೆ. 1956ಕ್ಕೂ ಮುಂಚೆಯೇ, ಮಹಾರಾಷ್ಟ್ರವು ಚಿಕ್ಕ ಚಿಕ್ಕ ಜಲಾಶಯದ ಮೂಲಕ  ಸಂಗ್ರಹಿಸಿದ್ದ ನೀರಿನ ಪ್ರಮಾಣವನ್ನು 1973ರ ಕೃಷ್ಣಾ ನ್ಯಾಯಮಂಡಳಿ ಪ್ರಾಧಿಕಾರ–1, ಬಚಾವತ್‌ ಆಯೋಗ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಹೆಚ್ಚಿನ ನೀರು ಅವರಿಗೆ ಲಭಿಸಿದೆ’ ಎಂದು ತಿಳಿಸಿದರು.

ಪಂಪ್‌ಸೆಟ್‌ಗೆ ವಿದ್ಯುತ್‌ ಸ್ಥಗಿತ
‘ಫೆಬ್ರುವರಿ 15ರಿಂದ ಜೂನ್‌ 30ರವರೆಗೂ ನದಿ ಪಾತ್ರ, ಜಲಾಶಯ, ಕಾಲುವೆ ನೀರಿನಲ್ಲಿನ ರೈತರ ಪಂಪ್‌ಸೆಟ್‌ಗಳಿಗೆ ಮಹಾರಾಷ್ಟ್ರ ಸರ್ಕಾರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸುತ್ತದೆ. ಇದರಿಂದ ನದಿ ನೀರು ಬಳಸಲು ಸಾಧ್ಯವಾಗದೇ ಬೇಸಿಗೆಯಲ್ಲಿ ಅಪಾರ ಪ್ರಮಾಣದ ನೀರು ಉಳಿತಾಯವಾಗುತ್ತದೆ. ಮಳೆಗಾಲ ಆರಂಭವಾದ ಬಳಿಕ ಮತ್ತೆ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಾರೆ. ನಮ್ಮಲ್ಲೂ ಪ್ರಾಯೋಗಿಕವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಅಳವಡಿಸುವ ಚಿಂತನೆ ನಡೆದಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಅಧ್ಯಯನಕ್ಕೆ ಆಗ್ರಹ
‘ಮಹಾರಾಷ್ಟ್ರದಲ್ಲಿ ನೀರಾವರಿ ಕ್ಷೇತ್ರ ಹೆಚ್ಚು ಇದೆ. ಆದರೂ, ಬರಗಾಲದಲ್ಲೂ ಅಲ್ಲಿ ನೀರಿನ ಸಮಸ್ಯೆ ಇಲ್ಲ. ಸಂಕಷ್ಟ ಎಂದೊಡನೆ ರಾಜ್ಯಕ್ಕೂ ನೀರು ಹರಿಸುತ್ತಾರೆ. ಅಲ್ಲಿನ ನೀರು ನಿರ್ವಹಣೆ ಯಾವ ರೀತಿ ಇದೆ ಎಂಬುದರ ವಸ್ತುಸ್ಥಿತಿ ಅಧ್ಯಯನ ನಡೆಸಬೇಕಿದೆ. ಇದಕ್ಕಾಗಿ ತಜ್ಞರ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಬೇಕು’ ಎಂದು ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ರೈತರಾದ ಬೇನಾಳದ ಪಿ. ಆರ್‌. ಕುಂಬಾರ, ವಂದಾಲದ ಶಂಕ್ರಪ್ಪ ಹೆಬ್ಬಾಳ, ಚಿಮ್ಮಲಗಿಯ ರಾಮು ಜಗತಾಪ ಆಗ್ರಹಿಸಿದ್ದಾರೆ.

* ಮಹಾರಾಷ್ಟ್ರದ ಕೃಷ್ಣಾ ಕೊಳ್ಳದಲ್ಲಿ ಜಲಾಶಯ, ಬ್ಯಾರೇಜ್‌ ಬರಿದಾಗುವುದಿಲ್ಲ. ಡೆಡ್‌ ಸ್ಟೋರೇಜ್ ನೀರನ್ನು ಬಳಸುವುದಿಲ್ಲ. ಮುಂಗಾರಿನ ವರೆಗೆ ಕಾಪಿಟ್ಟುಕೊಳ್ಳುತ್ತಾರೆ
-ಬಸವರಾಜ ಕುಂಬಾರ, ಕಾಡಾ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.