ADVERTISEMENT

ಜಾತ್ರೆಯಲ್ಲಿ ನಾಡ ಪಿಸ್ತೂಲ್‌ ಮಾರಾಟ!

ಒಂಬತ್ತು ಜನರ ಬಂಧನ, 20 ನಾಡ ಪಿಸ್ತೂಲ್‌ ವಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಕಲಬುರ್ಗಿ ಪೊಲೀಸರು ವಶಪಡಿಸಿಕೊಂಡಿರುವ ನಾಡ ಪಿಸ್ತೂಲ್‌ಗಳು
ಕಲಬುರ್ಗಿ ಪೊಲೀಸರು ವಶಪಡಿಸಿಕೊಂಡಿರುವ ನಾಡ ಪಿಸ್ತೂಲ್‌ಗಳು   

ಕಲಬುರ್ಗಿ: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ನಾಡ ಪಿಸ್ತೂಲ್‌ ಮಾರಾಟ ಮಾಡುತ್ತಿದ್ದ ದಿ.ಚಂದಪ್ಪ ಹರಿಜನ ಅವರ ಇಬ್ಬರು ಸಹಚರರು ಸೇರಿ ಒಂಬತ್ತು ಜನರನ್ನು ಬಂಧಿಸಿರುವ ಪೊಲೀಸರು, 20 ನಾಡ ಪಿಸ್ತೂಲ್‌ ಮತ್ತು 54 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಫಜಲಪುರ ತಾಲ್ಲೂಕು ಗೊಬ್ಬೂರ ಬಳಿ ಸೋಮವಾರ ಬೆಳಿಗ್ಗೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಅರ್ಜುನ ಭೋಸಗಾ (45) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಅಫಜಲಪುರ ತಾಲ್ಲೂಕು ದೇವಲ ಗಾಣಗಾಪುರದಲ್ಲಿ ದತ್ತ ಜಯಂತಿ ಅಂಗವಾಗಿ ಜಾತ್ರೆ ನಡೆಯುತ್ತಿದೆ. ಅಲ್ಲಿಗೆ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುತ್ತಿದ್ದು, ಅಲ್ಲಿ ನಾಡ ಪಿಸ್ತೂಲ್‌ ಮಾರಾಟ ಮಾಡಲು ಅರ್ಜುನ ಉದ್ದೇಶಿಸಿದ್ದ’ ಎಂದು ಐಜಿಪಿ ಅಲೋಕಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಬಂಧಿಸಲು ತೆರಳಿದ್ದ ಪೊಲೀಸರತ್ತ ಅರ್ಜುನ ಕಲ್ಲು ತೂರಿದ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದರೂ ಶರಣಾಗಲಿಲ್ಲ. ಸಬ್‌ಇನ್‌ಸ್ಪೆಕ್ಟರ್‌ ಪ್ರದೀಪ್‌ ಮತ್ತು ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಶಿವಪ್ಪ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ. ಆಗ ಪೊಲೀಸರು ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ’ ಎಂದರು.

‘ಉತ್ತರದಿಂದ ಪೂರೈಕೆ’

‘ಅಕ್ರಮ ನಾಡ ಪಿಸ್ತೂಲ್‌ಗಳು ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶಗಳಿಂದ ಪೂರೈಕೆಯಾಗುತ್ತಿವೆ. ಮಧ್ಯಪ್ರದೇಶದಲ್ಲಿ ಅಕ್ರಮ ನಾಡ ಪಿಸ್ತೂಲ್‌ ತಯಾರಿಕೆ ಗುಡಿ ಕೈಗಾರಿಕೆಯ ಮಾದರಿಯಲ್ಲಿ ನಡೆಯುತ್ತಿದೆ. ಅಲ್ಲಿಂದ ನಮ್ಮ ರಾಜ್ಯಕ್ಕೆ ಪೂರೈಕೆಯಾಗುವುದನ್ನು ತಡೆಯಲು ಕಲಬುರ್ಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ನೇತೃತ್ವದ ತಂಡವನ್ನು ಅಲ್ಲಿಗೆ ಕಳಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.