ADVERTISEMENT

ಜಾನಪದ ವಿವಿಗೆ ಹಾವೇರಿ ಸೂಕ್ತ:ಗೊರುಚ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:10 IST
Last Updated 16 ಫೆಬ್ರುವರಿ 2011, 18:10 IST

ರಾಯಚೂರು: ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಈ ವಿವಿ ಸ್ಥಾಪನೆಗೆ 100 ಕೋಟಿ ರೂಪಾಯಿ ಒದಗಿಸಬೇಕು. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಇರುವ ನಗರಕ್ಕೆ ಸಮೀಪದ ಪ್ರದೇಶದಲ್ಲಿ 500 ಎಕರೆ ಜಮೀನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಗೊ.ರು ಚನ್ನಬಸಪ್ಪ ಹೇಳಿದರು.

ಎರಡು ದಿನಗಳ ರಾಯಚೂರು ಜಿಲ್ಲಾ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಉದ್ದೇಶಿತ ವಿವಿ ಸ್ಥಾಪನೆಗೆ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಈ ವಿವಿ ಸ್ಥಾಪನೆ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯ ಅಕಾಡೆಮಿಯದ್ದು. ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ಸಂಬಂಧಪಡದೇ ಇರುವ ಮತ್ತು ಸರ್ಕಾರಕ್ಕೆ ಸೇರಿದ 500 ಎಕರೆ ಜಾಗ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ಕಳೆದ ವರ್ಷ ಅಕಾಡೆಮಿಗೆ 20 ಲಕ್ಷ ದೊರಕಿಸಲಾಗಿತ್ತು. ಈ ವರ್ಷ 40 ಲಕ್ಷ ದೊರಕಿಸಿದ್ದು, ಅನೇಕ ಚಟುವಟಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರ ಅಕಾಡೆಮಿಗೆ 100 ಕೋಟಿ ರೂಪಾಯಿ ನೀಡಿದರೆ ಇದರಿಂದ ಬರುವ ಬಡ್ಡಿಯಲ್ಲಿ ಜಾನಪದ ಕಲಾವಿದರ ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗಲು ’ಕ್ಷೇಮ ನಿಧಿ’ ಸ್ಥಾಪಿಸಲಾಗುವುದು  ಎಂದು ವಿವರಿಸಿದರು. ಬೀದರ್‌ನಲ್ಲಿ ಜನಪದ ಸಮ್ಮೇಳನ: ಏಪ್ರಿಲ್ 23,24 ಮತ್ತು 25ರಂದು ಬೀದರ್ ಜಿಲ್ಲೆಯಲ್ಲಿ ಅಖಿಲ ಭಾರತ ಜನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.