ADVERTISEMENT

ಜಾರಕಿಹೊಳಿ ಸಹೋದರರ ಭಿನ್ನಮತ ಶಮನಕ್ಕೆ ಕಸರತ್ತು

ಪ್ರತ್ಯೇಕವಾಗಿ ಚರ್ಚಿಸಿದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಗೋರ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ (ಬಲಬದಿ) ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದರು. ಸಚಿವ ಎಚ್.ಕೆ. ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಆರ್. ಪಾಟೀಲ (ಎಡಬದಿ) ಅವರೂ ಇದ್ದಾರೆ.
ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಠಾಗೋರ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ (ಬಲಬದಿ) ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದರು. ಸಚಿವ ಎಚ್.ಕೆ. ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಆರ್. ಪಾಟೀಲ (ಎಡಬದಿ) ಅವರೂ ಇದ್ದಾರೆ.   

ಬೆಂಗಳೂರು:ಸತೀಶ್‌ ಜಾರಕಿಹೊಳಿ ಹಾಗೂ ರಮೇಶ್‌ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟದಿಂದ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ
ಯಾಗುತ್ತಿದ್ದು, ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಿವಿಮಾತು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರದಿಂದ ಆರಂಭವಾಗಿರುವ ಜಿಲ್ಲೆಗಳ ಸಚಿವರು, ಶಾಸಕರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿದ ವೇಣುಗೋಪಾಲ್‌ ಜಾರಕಿಹೊಳಿ ಸಹೋದರರನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿಗಳಾದ ಮಾಣಿಕ್ಯಂ ಠಾಗೋರ್ ಮತ್ತು ಮಧು ಯಾಸ್ಕಿಗೌಡ್ ಅವರು ಈ ಸಂದರ್ಭದಲ್ಲಿದ್ದರು.

ADVERTISEMENT

ಮೊದಲ ದಿನ ಬೆಳಗಾವಿ ಕಂದಾಯ ವಿಭಾಗದ ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಬಾಲಗಕೋಟೆ, ವಿಜಯಪುರ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮುಖಂಡರೊಂದಿಗೆ ಚರ್ಚಿಸಲಾಯಿತು.

‘ಬೆಳಗಾವಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ. ನಿಮ್ಮ ಕಿತ್ತಾಟದಿಂದಾಗಿ ಜಿಲ್ಲೆಯಲ್ಲಿ ಪಕ್ಷ ಎರಡು ಭಾಗವಾಗುತ್ತಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದು, ಭಿನ್ನಮತ ಮರೆತು ಒಟ್ಟಾಗಿ ಕೆಲಸ ಮಾಡುವಂತೆ’ ವೇಣುಗೋಪಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪಕ್ಷ ಬಿಡಬೇಡಿ: ಸತೀಶ್‌ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುತ್ತಾರೆ ಎಂಬ  ಮಾಹಿತಿಗಳು ಹರಿದಾಡುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಎಲ್ಲ ಮುಖಂಡರು ಸತೀಶ್‌ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಗುಂಪುಗಾರಿಕೆ ಮಾಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೂ ಹಿರಿಯ ನಾಯಕರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ–ಪಕ್ಷದ ಮಧ್ಯೆ ಸಮನ್ವಯ: ಸರ್ಕಾರ ಮತ್ತು ಜಿಲ್ಲಾ ಮಟ್ಟದ ನಾಯಕರ ಮಧ್ಯೆ ಇದ್ದ ಅಂತರವನ್ನು ಕಡಿಮೆ ಮಾಡುವ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ನಡೆಸಿದರು.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಂತೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಮಟ್ಟದಲ್ಲಿ ನಾಯಕರು ಮಧ್ಯೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬಿಡಬೇಕು. ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದೂ  ಸಲಹೆ ನೀಡಿದ್ದಾರೆ.

‘ಅಹಿಂದ ವರ್ಗದವರಿಗಷ್ಟೇ ಸರ್ಕಾರವಲ್ಲ’: ಕಾಂಗ್ರೆಸ್ ಸರ್ಕಾರ ಅಹಿಂದ ವರ್ಗದವರ ಪರವಾಗಿ ಮಾತ್ರ ಇದೆ ಎಂಬ ಅಭಿಪ್ರಾಯ ರೂಪುಗೊಂಡಿದ್ದು, ಇದು ಮೇಲ್ವರ್ಗದವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಭಿಪ್ರಾಯವನ್ನು ತೊಡೆದುಹಾಕಬೇಕು ಎಂದು ಬಹುತೇಕ ಜಿಲ್ಲೆಗಳ ಮುಖಂಡರು ಮನವಿ ಮಾಡಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಸಮುದಾಯದವರಿಗೆ ಹೆಚ್ಚಿನ  ಆದ್ಯತೆ ನೀಡುವಂತೆ ಮನವಿಯನ್ನೂ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ಇಲ್ಲ. ಕೇವಲ ಜಿಲ್ಲೆಯ ರಾಜಕಾರಣದ ಬಗ್ಗೆ ಮಾಹಿತಿ ಪಡೆದು ಕೆಲ ಸೂಚನೆ ಕೊಟ್ಟಿದ್ದಾರೆ.
ಎಚ್.ಕೆ. ಪಾಟೀಲ,
ಗ್ರಾಮೀಣಾಭಿವೃದ್ಧಿ ಸಚಿವ
*
ಹಿರಿಯ ಮುಖಂಡರ ಭೇಟಿ ಜಿಲ್ಲೆಯ ನಾಯಕರ ಹುಮ್ಮಸ್ಸು ಹೆಚ್ಚಿಸಿದೆ. ಪಕ್ಷದ ಸಂಘಟನೆಗೆ ಇದು ಸಹಕಾರಿ.
ಎಸ್.ಆರ್. ಪಾಟೀಲ,
ವಿಧಾನ ಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.