ADVERTISEMENT

ಜಿಲ್ಲೆಗಳಲ್ಲಿ ಮಾದರಿ ಶಿಕ್ಷಣ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಾದರಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಕುರಿತು ಕರ್ನಾಟಕ ಜ್ಞಾನ ಆಯೋಗ ಚಿಂತನೆ ನಡೆಸಿದೆ. ಅಲ್ಲದೆ, ಉನ್ನತ ಶಿಕ್ಷಣ ಕೇಂದ್ರಗಳ ಬೋಧನಾ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲನೆಗೆ ಒಳಪಡಿಸುವ ಯೋಚನೆಯೂ ಆಯೋಗದ ಮುಂದಿದೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಜ್ಞಾನ ಆಯೋಗದ 14ನೇ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ.

ಆಯೋಗದ ಅವಧಿ ಎರಡು ವರ್ಷಗಳವರೆಗೆ ವಿಸ್ತರಣೆಯಾದ ನಂತರ ನಡೆದಿರುವ ಮೊದಲ ಸಭೆ ಇದಾಗಿದೆ.
ಸಭೆಯ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದ ಆಯೋಗದ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಅವರು, `ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಟಕುವಂತೆ ಮಾಡುವ ಸಲಹೆ ಇಂದಿನ (ಬುಧವಾರ) ಸಭೆಯಲ್ಲಿ ಸದಸ್ಯರಿಂದ ಬಂದಿದೆ. ಈ ಕುರಿತು ಆಯೋಗ ಗಮನ ಹರಿಸಲಿದೆ~ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಾಪಕರ ಬೋಧನೆ ವಿದ್ಯಾರ್ಥಿಗಳಿಗೆ ಎಷ್ಟು ಪ್ರಯೋಜನಕಾರಿಯಾಗಿದೆ, ಅವರ ಪಠ್ಯ ಸಂಬಂಧಿ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬ ಕುರಿತು ಪರಿಶೀಲನೆ ನಡೆಸಬೇಕು ಎನ್ನುವ ಸಲಹೆಯೂ ಸದಸ್ಯರಿಂದ ಬಂದಿದೆ. ಈ ಕುರಿತೂ ಆಯೋಗ ಗಮನ ಹರಿಸಲಿದೆ ಎಂದು ಡಾ. ಕಸ್ತೂರಿ ರಂಗನ್ ಹೇಳಿದರು.

ಆಯೋಗಕ್ಕೆ ಉಳಿದಿರುವ ಒಂದೂವರೆ ವರ್ಷದ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಬಲವರ್ಧನೆ, ವೃತ್ತಿ ಶಿಕ್ಷಣ ನೀತಿ ಅಭಿವೃದ್ಧಿಪಡಿಸುವುದು, ಆಯುಷ್ ಇಲಾಖೆಯನ್ನು ಮುಖ್ಯವಾಹಿನಿಗೆ ತರುವುದು, ಸಾಂಪ್ರದಾಯಿಕ ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಕೆಲಸ ಮಾಡಲಾಗುವುದು ಎಂದರು.

ಆಯೋಗದ ಮೂರು ವರ್ಷಗಳ ಮೊದಲ ಅವಧಿ ಪೂರ್ಣಗೊಂಡಾಗ ಸರ್ಕಾರಕ್ಕೆ 60 ಶಿಫಾರಸುಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ ಒಟ್ಟು 12 ಶಿಫಾರಸುಗಳು ಅನುಷ್ಠಾನಕ್ಕೆ ಬಂದಿವೆ, 22 ಶಿಫಾರಸುಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ ಎಂದು ಹೇಳಿದರು.

ಜ್ಞಾನ ಫೆಲೊ: ಒಟ್ಟು 19 `ಜ್ಞಾನ ಫೆಲೊ~ಗಳು ರಾಜ್ಯ ಸರ್ಕಾರದ ಒಂಬತ್ತು ವಿವಿಧ ಇಲಾಖೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.