ADVERTISEMENT

ಜುಲೈನಿಂದ ಶಾಲಾ ಮಕ್ಕಳಿಗೆ ಹಾಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST
ಜುಲೈನಿಂದ ಶಾಲಾ  ಮಕ್ಕಳಿಗೆ ಹಾಲು
ಜುಲೈನಿಂದ ಶಾಲಾ ಮಕ್ಕಳಿಗೆ ಹಾಲು   

ಬೆಂಗಳೂರು:  ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೆ ಮುಂದಿನ ತಿಂಗಳಿಂದ ನಂದಿನಿ ಹಾಲು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ಎನ್.ಎ. ಹ್ಯಾರಿಸ್ ಫೌಂಡೇಷನ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾಸಂಪದ ಮತ್ತು ಕಾಂಗ್ರೆಸ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 51,180 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇವೆ. 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 65.12 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಪ್ರತಿ ದಿನ ವಿದ್ಯಾರ್ಥಿಗಳಿಗೆ ತಲಾ 150 ಮಿ.ಲೀ. ಹಾಲು ನೀಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಕೆ.ಎಂ.ಎಫ್ ಹಾಲು ಸರಬರಾಜು ಮಾಡಲಿದೆ ಎಂದು ಹೇಳಿದರು. ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ನಾಲ್ಕು ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ ನಂತರ ಹಾಲಿನ ಸಂಗ್ರಹ ಹೆಚ್ಚಾಗಿದೆ. ಅದನ್ನು ಹಾಲಿನ ಪುಡಿ ಮಾಡುವ ಸಾಮರ್ಥ್ಯ ಕೂಡ ಇಲ್ಲ. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಹಾಲು ನೀಡುವ ಯೋಜನೆ ಜಾರಿ ಮಾಡುತ್ತಿರುವುದಾಗಿ ಅವರು ಹೇಳಿದರು.

ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ:  2013-14ನೇ ಸಾಲಿನ ಬಜೆಟ್ ಮಂಡಿಸುವವರೆಗೂ ಸಚಿವ ಸಂಪುಟ ವಿಸ್ತರಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.