ADVERTISEMENT

ಜೂಜಾಟ ಆಯೋಜಕರಿಗೆ ಅಧಿಕಾರಿ ಶ್ರೀರಕ್ಷೆ?

ವೆಂಕಟೇಶ್ ಜಿ.ಎಚ್
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST
ಜೂಜಾಟ ಆಯೋಜಕರಿಗೆ ಅಧಿಕಾರಿ ಶ್ರೀರಕ್ಷೆ?
ಜೂಜಾಟ ಆಯೋಜಕರಿಗೆ ಅಧಿಕಾರಿ ಶ್ರೀರಕ್ಷೆ?   

ಹುಬ್ಬಳ್ಳಿ: ಅವಳಿನಗರದಲ್ಲಿ ಹೆಚ್ಚುತ್ತಿರುವ ಚಿನ್ನದ ಸರ ಅಪಹರಣ ಪ್ರಕರಣಗಳೊಂದಿಗೆ ಕಾನೂನುಬಾಹಿರ ಜೂಜಾಟವೂ ತಳುಕು ಹಾಕಿಕೊಂಡಿದೆ. ಅದರಲ್ಲೂ ನಗರದ ಸುತ್ತಮುತ್ತಲಿನ ಕೃಷಿ ಭೂಮಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಿರಿಯ ಸಹೋದರನೇ ಜೂಜಾಟದ (ಅಂದರ್-ಬಾಹರ್) ಅಡ್ಡೆಗಳನ್ನು ನಡೆಸುತ್ತಿದ್ದಾನೆ ಎನ್ನಲಾಗಿದ್ದು ಕ್ರಮ ಕೈಗೊಳ್ಳಲಾಗದೆ ಪೊಲೀಸರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಸರಗಳ್ಳತನ ಮತ್ತು ಜೂಜಾಟ ತಳಕು ಹಾಕಿಕೊಂಡಿರುವುದು ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ ಅವರ ಗಮನಕ್ಕೂ ಬಂದಿದ್ದು ತನಿಖೆ ನಡೆಸಲೂ ಅವರು ಮುಂದಾಗಿದ್ದಾರೆ. `ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ `ತಮ್ಮ'ನೇ ಹಳೇಹುಬ್ಬಳ್ಳಿ, ಸಾಯಿನಗರದ ಸುತ್ತಮುತ್ತಲಿನ ಕೃಷಿ ಜಮೀನು, ಎಪಿಎಂಸಿ ಯಾರ್ಡ್ ಹಿಂಭಾಗ, ಕಲಘಟಗಿ ರಸ್ತೆಯ ಅಂಚಟಗೇರಿಯ ಗುಡ್ಡದಲ್ಲಿ ಕಾನೂನುಬಾಹಿರವಾಗಿ ಇಸ್ಪೀಟಾಟಕ್ಕೆ ಅನುವು ಮಾಡಿಕೊಡುತ್ತಿದ್ದರೂ ಆಯಾ ವ್ಯಾಪ್ತಿಯ ಠಾಣೆಗಳ ಪೊಲೀಸರು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ನಗರದ ವಿವಿಧೆಡೆ ಜೂಜಾಟ ನಡೆಸುವ ತಂಡಗಳಿಗೂ ಅದೇ ವ್ಯಕ್ತಿಯ ಶ್ರೀರಕ್ಷೆ ಇದ್ದು, ಅವರಿಂದ ನಿತ್ಯ ಮಾಮೂಲಿ ಪಡೆಯುತ್ತಿದ್ದಾರೆ. ಹೀಗಾಗಿ ಜೂಜಾಟ ಕಾನೂನುಬದ್ಧ ಎಂಬಂತೆಯೇ ನಡೆಯುತ್ತಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

`ಜೂಜಿನ ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುವವರು ಅದನ್ನು ವಾಪಸ್ ಗಳಿಸಲು ಸರಗಳ್ಳತನಕ್ಕೆ ಇಳಿಯುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರ ಗಮನವನ್ನು ಬೇರೆಡೆಗೆ ತಿರುಗಿಸಲು ಜೂಜಾಟ ಆಯೋಜಿಸುವ ತಂಡಗಳೇ ವ್ಯವಸ್ಥಿತವಾಗಿ ಸರ ಅಪಹರಣ ಕೃತ್ಯಗಳನ್ನು ನಡೆಸುತ್ತಿವೆ. ಸಿಬ್ಬಂದಿ ಕೊರತೆಯಿಂದಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ನಗರ ಅಪರಾಧ ತನಿಖಾ ದಳ (ಸಿಸಿಬಿ) ನಿಷ್ಕ್ರಿಯಗೊಂಡಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ' ಎಂದು ಮೂಲಗಳು ವಿವರಿಸಿವೆ.

ಜೂಜಾಟಕ್ಕೂ ಸರಗಳ್ಳತನಕ್ಕೂ ನೇರ ಸಂಬಂಧ: ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪದ್ಮನಯನ, `ಜೂಜಾಟಕ್ಕೂ ಸರಗಳ್ಳತನಕ್ಕೂ ನೇರ ಸಂಬಂಧವಿದೆ. ಅಲ್ಲಿ ದುಡ್ಡು ಕಳೆದುಕೊಳ್ಳುವವರು ಸರ ಅಪಹರಣ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ಮೊದಲು ಜೂಜಾಟದ ಅಡ್ಡೆಗಳನ್ನು ನಿಗ್ರಹಿಸಿ ಎಂದು ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದರು.

`ತನ್ನ ಸಹೋದರನೇ ನಡೆಸುವ ಜೂಜು ಕೂಟಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೇ ರಕ್ಷಣೆಯಾಗಿ ನಿಲ್ಲುವುದು ದುರದೃಷ್ಟಕರ. ಇದು ನಾಚಿಕೆಗೇಡಿನ ವಿಚಾರ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಈ ಪ್ರಕರಣದ ಬಗ್ಗೆ  ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಚಿನ್ನ ಗಿರವಿ: ಎಚ್ಚರಕ್ಕೆ ಸೂಚನೆ

`ಚಿನ್ನ ಗಿರವಿ ಇಡುವವರ ಪೂರ್ಣ ಮಾಹಿತಿ ಪಡೆಯಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಗಿರವಿ ಇಟ್ಟುಕೊಳ್ಳುವಾಗ ಚಿನ್ನದ ಆಭರಣ ತುಂಡಾಗಿದ್ದಲ್ಲಿ ಸಂಬಂಧಿಸಿದವರಿಂದ ಕಾರಣ ಕೇಳಿ, ಖರೀದಿ ದಾಖಲೆ ಪರಿಶೀಲಿಸಿ ಗಿರವಿ ಇಟ್ಟುಕೊಳ್ಳಬೇಕು' ಎಂದು ಜಿಲ್ಲೆಯಲ್ಲಿನ ಬ್ಯಾಂಕುಗಳೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಐ) ಹಾಗೂ ಸರಾಫ್ ವರ್ತಕರಿಗೆ ಪದ್ಮನಯನ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.