ADVERTISEMENT

ಜೂನ್ 18ರಿಂದ ಪೂರಕ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಬೆಂಗಳೂರು:  ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಜೂನ್ 18ರಿಂದ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಫಲಿತಾಂಶ ಪಟ್ಟಿಯೊಂದಿಗೆ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ಕಳುಹಿಸಿಕೊಡಲಾಗಿದೆ. ಇದೇ 26ರ ಒಳಗೆ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಯಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಅರ್ಜಿಗಳನ್ನು ಶುಲ್ಕದೊಂದಿಗೆ ಇದೇ 29ರ ಒಳಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಬೇಕು. ನಿಗದಿತ ಶುಲ್ಕ ಪಾವತಿಸದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದರು.

ಅನುತ್ತೀರ್ಣ ಅಭ್ಯರ್ಥಿಗಳು ಅಂಕಗಳ ಮರು ಎಣಿಕೆ, ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಫಲಿತಾಂಶಕ್ಕಾಗಿ ಕಾಯದೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಪೂರಕ ಪರೀಕ್ಷೆಯ ಒಂದು ವಿಷಯಕ್ಕೆ ರೂ 200, ಎರಡು ವಿಷಯಕ್ಕೆ ರೂ 250 ಹಾಗೂ ಎರಡಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ 315 ಶುಲ್ಕವನ್ನು ನಿಗದಿಪಡಿಸಲಾಗಿದೆ.

ಮರು ಎಣಿಕೆ ಮತ್ತು ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಲು ಇದೇ 28 ಕೊನೆಯ ದಿನ. ಮರು ಎಣಿಕೆ ಅಥವಾ ಛಾಯಾ ಪ್ರತಿ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಛಾಯಾ ಪ್ರತಿ ಪಡೆದ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕಾಗಿ ನಿಗದಿತ ಶುಲ್ಕದೊಡನೆ, ಛಾಯಾ ಪ್ರತಿ ಪಡೆದ ಏಳು ದಿನಗಳ ಒಳಗೆ ಮಂಡಳಿಗೆ ಅರ್ಜಿ ಸಲ್ಲಿಸಬೇಕು.

ಒಂದು ವಿಷಯದ ಅಂಕಗಳ ಮರು ಎಣಿಕೆಗೆ ರೂ 150, ಒಂದು ವಿಷಯದ ಛಾಯಾ ಪ್ರತಿಗೆ ರೂ 300 ಹಾಗೂ ಒಂದು ವಿಷಯದ ಮರು ಮೌಲ್ಯಮಾಪನಕ್ಕೆ ರೂ 700 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

`ಪ್ರಥಮ ಪಿಯುಸಿ ಪ್ರವೇಶ: ಆತಂಕ ಬೇಡ~: ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ ಪ್ರಥಮ ಪಿಯುಸಿಗೆ ಸೀಟು ಸಿಗುತ್ತದೋ, ಇಲ್ಲವೋ ಎಂದು ಆತಂಕ ಪಡಬೇಕಾಗಿಲ್ಲ. ಪದವಿ ಪೂರ್ವ ಕಾಲೇಜುಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇದಲ್ಲದೆ ಪಾಲಿಟೆಕ್ನಿಕ್, ಐಟಿಐಗಳಲ್ಲೂ ಪ್ರವೇಶ ಪಡೆಯಬಹುದಾಗಿದೆ ಎಂದು ಕಾಗೇರಿ ತಿಳಿಸಿದರು.

ಪದವಿ ಪೂರ್ವ ಇಲಾಖೆಯ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳು ತಾವು ಪ್ರವೇಶ ಬಯಸುವ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಕೇವಲ 20 ರೂಪಾಯಿ ಶುಲ್ಕ ಪಾವತಿಸಿದರೆ ಸಾಕು ಎಂದು ಅವರು ಹೇಳಿದರು.


`ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್~

ಪ್ರತಿಯೊಂದು ಶೈಕ್ಷಣಿಕ ಬ್ಲಾಕ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ತಲಾ ಮೂವರು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಉಚಿತವಾಗಿ ಕಂಪ್ಯೂಟರ್‌ಗಳನ್ನು ನೀಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಇದುವರೆಗೆ ಪ್ರತಿ ಜಿಲ್ಲೆಯಲ್ಲಿ ಮೂವರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಬ್ಲಾಕ್ ಮಟ್ಟದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ ಎಂದರು. ರಾಜ್ಯದಲ್ಲಿ 203 ಶೈಕ್ಷಣಿಕ ಬ್ಲಾಕ್‌ಗಳಿವೆ. ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.

ವೇಳಾಪಟ್ಟಿ
ಜೂನ್ 18: ಗಣಿತ
ಜೂನ್ 19: ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಜೂನ್ 20: ವಿಜ್ಞಾನ
ಜೂನ್ 21: ಇಂಗ್ಲಿಷ್, ಕನ್ನಡ
ಜೂನ್ 22: ಸಮಾಜ ವಿಜ್ಞಾನ
ಜೂನ್ 24: ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.