ಬೆಂಗಳೂರು: ಲೋಕಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಾರ್ಯ ಚುರುಕು ಗೊಂಡಿದೆ.
15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಸಿದ್ಧವಾಗಿದೆ. ಗೆಲ್ಲುವ ಸಾಮರ್ಥ್ಯ, ಜಾತಿ, ಆರ್ಥಿಕ ಬಲ ಇತ್ಯಾದಿಗಳ ಲೆಕ್ಕಾಚಾರ ನಡೆಯುತ್ತಿದೆ. ಇದೇ 10ರ ಒಳಗೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರಿನಿಂದ ಸಾ.ರಾ.ಮಹೇಶ್, ಚಾಮರಾಜನಗರದಿಂದ ಎಂ.ಶಿವಣ್ಣ, ಹಾಸನದಿಂದ ಎಚ್.ಡಿ.ದೇವೇಗೌಡ, ಚಿತ್ರದುರ್ಗದಿಂದ ಗೂಳಿಹಟ್ಟಿ ಶೇಖರ್, ಮಂಡ್ಯದಿಂದ ಸಿ.ಎಸ್.ಪುಟ್ಟರಾಜು, ಕಾರವಾರದಿಂದ ಶಿವಾನಂದ ನಾಯ್ಕ ಸ್ಪರ್ಧಿಸುವುದು ಖಚಿತವಾಗಿದೆ.
ಬೆಂಗಳೂರು ಗ್ರಾಮಾಂತರದಿಂದ ಪ್ರಭಾಕರ ರೆಡ್ಡಿ, ಕೋಲಾರದಿಂದ ಉದ್ಯಮಿ ಕೇಶವ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ತುಮಕೂರಿನಿಂದ ಎ.ಕೃಷ್ಣಪ್ಪ, ಹುಲಿನಾಯ್ಕ ಅವರ ಹೆಸರುಗಳು ಕೇಳಿಬರುತ್ತಿವೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ, ಉದ್ಯಮಿ ಆದಿಕೇಶವಲು ಅಳಿಯ ಶ್ರೀನಿವಾಸ ಮೂರ್ತಿ ಹೆಸರು ಕೇಳಿಬರುತ್ತಿದೆ.
ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಪಕ್ಷದ ಸಂಸದೀಯ ಮಂಡಳಿ ಸಭೆ ಈ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ಪಕ್ಷದ ಪ್ರಾಬಲ್ಯ ಇರುವ 15 ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗು ತ್ತದೆ. ಆದರೆ, ಪಕ್ಷದ ಸಂಘಟನೆ ದೃಷ್ಟಿಯಿಂದ ಎಲ್ಲ ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.